ರಾಷ್ಟ್ರೀಯ

ಕಾಶ್ಮೀರ: 43 ಶವಗಳು ಪತ್ತೆ

Pinterest LinkedIn Tumblr

flood

* ಪ್ರವಾಹದ ನೀರಿನ ಮಟ್ಟ ಇಳಿಕೆ

* ಮೊಬೈಲ್ ಸೇವೆಗಳ ಪುನಾರಂಭ

* ಆಸ್ಪತ್ರೆಯೊಂದರಲ್ಲಿ 14 ಮಕ್ಕಳ ಶವ

ಶ್ರೀನಗರ, ಸೆ.14: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹದ ನೀರು ಇಳಿಕೆಯಾಗಿದ್ದು, ಪ್ರವಾಹಪೀಡಿತ ಪ್ರದೇಶಗಳಲ್ಲಿ 14 ಮಕ್ಕಳು ಸೇರಿದಂತೆ ಒಟ್ಟು 43 ಶವಗಳು ಪತ್ತೆಯಾಗಿವೆ. ಪ್ರವಾಹದ ನೀರಿನಿಂದ ಮುಳುಗಡೆಯಾಗಿದ್ದ ಇಲ್ಲಿನ ಜಿ.ಬಿ.ಪಂತ್ ಸರಕಾರಿ ಆಸ್ಪತ್ರೆಯೊಂದರಲ್ಲಿ 14 ಮಕ್ಕಳ ಶವಗಳು ಲಭಿಸಿವೆ. ಶ್ರೀ ಮಹಾರಾಜಾ ಹರಿ ಸಿಂಗ್ ಆಸ್ಪತ್ರೆ (ಎಸ್‌ಎಂಎಚ್‌ಎಸ್), ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ (ಜಿಎಂಸಿ) ಸೇರಿದಂತೆ ಕಾಶ್ಮೀರದ ಬಹುತೇಕ ಆಸ್ಪತ್ರೆಗಳು ಪ್ರವಾಹದ ನೀರಿನಿಂದ ಮುಳುಗಿ ಹೋಗಿದ್ದವು.

ಕಾಶ್ಮೀರ ಕಣಿವೆಯೊಂದರಲ್ಲೇ 29 ಶವಗಳು ದೊರಕಿವೆ ಎಂದು ರಾಜ್ಯ ಸರಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಶ್ರೀನಗರದ ಜನವಸತಿ ಪ್ರದೇಶಗಳಾದ ಶಿವಪುರ, ರಾಜ್‌ಬಾಗ್, ಜವಾಹರ್‌ನಗರ್, ವಝೀರ್‌ಬಾಗ್, ಗೋಗ್ಜಿಬಾಗ್, ಕರಣ್‌ನಗರ್, ಶೇತ್ರಶಾಹಿ, ಬೆಮೀನಾ, ಖುಮರ್‌ವಾರಿ ಮತ್ತು ಇತರ ಪ್ರದೇಶಗಳಲ್ಲಿ ನಾಲ್ಕರಿಂದ ಹತ್ತು ಅಡಿಗಳಷ್ಟು ಪ್ರವಾಹದ ನೀರು ಹರಿಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದ ಪ್ರಮುಖ ವ್ಯಾಪಾರ ಸ್ಥಳಗಳಾದ ಲಾಲ್ ಚೌಕ್, ರೆಸಿಡೆನ್ಸಿ ರಸ್ತೆ, ಮೈಸುಮಾ, ಹರಿಸಿಂಗ್ ಬೀದಿ ಮತ್ತು ಕರಣ್‌ನಗರ್‌ಗಳು ಈಗಲೂ ನೀರಿನಿಂದ ಮುಳುಗಿವೆ. ಆದರೆ ನೀರಿನ ಮಟ್ಟದಲ್ಲಿ ಇಳಿಕೆಯಾಗುತ್ತಿದೆ.

ಶ್ರೀನಗರದ ಹಳೆಯ ನಗರ ಪ್ರದೇಶದ ಮಾರುಕಟ್ಟೆಗಳು ಕಳೆದ ಆರು ದಿನಗಳಿಂದ ಮುಚ್ಚಿವೆ. ಮಾರುಕಟ್ಟೆಯಲ್ಲಿ ಸರಕು-ಸಾಮಗ್ರಿಗಳ ಪೂರೈಕೆಯಿಲ್ಲದೆ ವ್ಯಾಪಾರಕ್ಕೆ ತೊಂದರೆಯಾಗಿದೆ. ಆದರೆ ಈ ಪ್ರದೇಶಗಳು ಪ್ರವಾಹದಿಂದ ನೇರವಾಗಿ ತೊಂದರೆಗೆ ಒಳಗಾಗಿಲ್ಲ.

ಈ ಮಧ್ಯೆ ಕಳೆದ ಆರು ದಿನಗಳಿಂದ ಮುಚ್ಚಿರುವ ಶ್ರೀನಗರ-ಜಮ್ಮು ಹೆದ್ದಾರಿಯನ್ನು ತೆರೆಯಲು ಪ್ರಯತ್ನಗಳು ನಡೆದಿವೆ. ಉತ್ತರ ಕಾಶ್ಮೀರದ ಗಂದೇರ್‌ಬಾಲ್ ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಭಾರೀ ಜನಸಂದಣಿ ಕಾಣುತ್ತಿದೆ. ಮನಾಲಿ-ಲೇಹ್-ಶ್ರೀನಗರ ಹೆದ್ದಾರಿಯ ಮೂಲಕ ರಾಜ್ಯದೊಳಗೆ ಪೆಟ್ರೋಲಿಯಂ ಉತ್ಪನ್ನಗಳ ಸಾಗಾಟಕ್ಕೆ ಕ್ರಮಕೈಗೊಳ್ಳಲಾಗಿದೆ.

ಈ ನಡುವೆ ಶನಿವಾರದ ಹೊತ್ತಿಗೆ ರಾಜ್ಯದಲ್ಲಿ ಭಾಗಶಃ ಪ್ರಮಾಣದಲ್ಲಿ ಮೊಬೈಲ್ ಸೇವೆಗಳು ಪುನಾರಂಭಗೊಂಡಿವೆ. ರಾಜ್ಯದ ಬೇರೆಬೇರೆ ಭಾಗಗಳಿಂದ ಈವರೆಗೆ 1.42 ಲಕ್ಷ ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಪೂಂಛ್ ಜಿಲ್ಲೆಯೊಂದನ್ನು ಹೊರತುಪಡಿಸಿ ರಾಜ್ಯದ ಬೇರೆ ಎಲ್ಲ ಕಡೆಗಳಲ್ಲಿ ಮೊಬೈಲ್ ಸೇವೆಗಳನ್ನು ಬಹುತೇಕವಾಗಿ ಪುನಾರಂಭಿಸಲಾಗಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಶನಿವಾರ ಹೊಸದಿಲ್ಲಿಯಲ್ಲಿ ತಿಳಿಸಿದ್ದರು.

Write A Comment