ಗಲ್ಫ್

ದುಬೈಯಲ್ಲಿ ವಿಶ್ವ ರಂಗದಿನ ಆಚರಿಸಿದ ಧ್ವನಿ ಕಲಾವಿದರು

Pinterest LinkedIn Tumblr

ಮಾರ್ಚ್ 27 – ಇದು ವಿಶ್ವದ ಎಲ್ಲಾ ರಂಗಕರ್ಮಿಗಳು ಒಂದೇಸಮಯದಲ್ಲಿ ಸಂಭ್ರಮಿಸುವ ಏಕೈಕ ದಿನ , ಪ್ರದರ್ಶನ ಕಲೆಗಳಲ್ಲಿ ಮೇರು ಕಲೆಯಾದ ರಂಗಭೂಮಿಗೆ ಮೀಸಲಾದ ದಿನ . ಆ ದಿನ ಪ್ರಪಚದಾದ್ಯಂತ ಹಲವಾರು ರಂಗ ಚಟುವಟಿಕೆಗಳನ್ನು ಆಚರಿಸುವುದರ ಮೂಲಕ ರಂಗ ದಿನ ಆಚರಿಸುತ್ತಾರೆ . ದುಬೈಯಲ್ಲಿ ಧ್ವನಿ ಪ್ರತಿಷ್ಠಾನದ ಕಲಾವಿದರೂ ಒಟ್ಟು ಸೇರಿ ಬಹಳ ಅರ್ಥ ಪೂರ್ಣವಾಗಿ ‘ವಿಶ್ವರಂಗ ದಿನ ‘ ಆಚರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಾರರಾಗಿ ಭಾಗವಹಿಸಿದ ದುಬೈಯ ಕನ್ನಡ ನಿರೂಪಕಿ ಹಾಗು ಹವ್ಯಾಸಿ ರಂಗ ನಟಿ ಆರತಿ ಅಡಿಗ ‘ವಿಶ್ವ ರಂಗ ದಿನದ ‘ ಹಿನ್ನಲೆಯನ್ನು ಮತ್ತು ಅದರ ಉದ್ದೇಶವನ್ನು ತಿಳಿಸಿಕೊಟ್ಟು ಆಚರಣೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದರು ,1948 ರಲ್ಲಿinternational theater institute ( ITI) ಸ್ಥಾಪನೆ , 1961 ರಲ್ಲಿ ರಂಗ ದಿನಾಚರಣೆಯ ಪ್ರಸ್ತಾವನೆ, 1962 ರಿಂದ ಮಾರ್ಚ್ 27ರಂದು ಪ್ಯಾರಿಸ್ನ theater of nations ನ ಅಸ್ತಿತ್ವದ ನೆನಪಿನಲ್ಲಿ ಹಮ್ಮಿಕೊಳ್ಳುವ ದಿನಾಚರಣೆ ಮತ್ತು ಪ್ರತಿವರ್ಷ ಒಂದು ದೇಶದ ಪ್ರಸಿದ್ಧ ರಂಗಕರ್ಮಿಯೊಬ್ಬರು ರಂಗಭೂಮಿ ಕುರಿತು ಮಹತ್ವದ ಸಂದೇಶವನ್ನು ಕೊಡುವುದು ಇದೆಲ್ಲದರ ಬಗ್ಗೆ ಆಳವಾಗಿ ಮಾತನಾಡಿದರು . 2002ರಲ್ಲಿ ಗಿರೀಶ್ ಕಾರ್ನಾಡ್ ರವರು ಭಾರತದ ಪರವಾಗಿ ನೀಡಿದ ಸಂದೇಶದಲ್ಲಿ ಅವರು ಪ್ರಸ್ತಾಪಿಸಿದ ಭಾರತದ ನಾಟಕದ ಉದಯದ ಕಥೆ, ಭರತ ಮುನಿಯ ನಾಟ್ಯಶಾಸ್ತ್ರದ ಮೊದಲ ಅಧ್ಯಾಯವೇ ನಾಟಕ ಅನ್ನುವುದರ ಮೂಲಕ ಆರಂಭಗೊಳ್ಳುವ ಭಾರತದ ನಾಟಕದ ಇತಿಹಾಸವನ್ನು ತೆರೆದಿಟ್ಟರು . ವಿಶ್ವದಾದ್ಯಂತ ನೂರಾರು ದೇಶಗಳಲ್ಲಿ ಕೇಂದ್ರ ಹೊಂದಿರುವ ITI ಭಾರತದಲ್ಲಿ ಶೀಘ್ರವೇ ಕೇಂದ್ರ ಹೊಂದುವಂತಾಗಲಿ ,ರಂಗಭೂಮಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿರುವ ಭಾರತದ ಹಲವಾರು ರಂಗ ಸಂಸ್ಥೆಗಳಿಗೆ ನೆರವಾಗಲಿ ಅನ್ನುವ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ , ಸಾಹಿತ್ಯ ಹಾಗು ರಂಗಭೂಮಿಗೆ ಹಲವಾರು ರೀತಿಯ ಸೇವೆಯನ್ನು ತಾಯ್ನಾಡು ಹಾಗು ದುಬೈಯಲ್ಲಿ ಸಲ್ಲಿಸುತ್ತಾ ಬಂದಿರುವ ಹಿರಿಯ ಗಣ್ಯರಾದ ಶ್ರೀ ಸುಧಾಕರ್ ರಾವ್ ಪೇಜಾವರ ರವರು ಮಾತನಾಡಿ ,ನಾಟಕವಾಡುವುದು ಎನ್ನುವ ಮಾತು ಕೇವಲ ವ್ಯಂಗಕ್ಕಾಗಿ ಅಥವಾ ರಾಜಕೀಯ ಭಾಷಣಗಳಿಗೆ ಸೀಮಿತವಾಗದೆ ಅದರ ಹಿಂದಿನ ಗಾಢತೆ ,ಪರಿಶ್ರಮ ಮತ್ತು ಸಮಯ ಎಲ್ಲರಿಗೂ ಅರ್ಥವಾಗಬೇಕು ಎಂದರು. ದುಬೈಯಂತಹ ದೇಶದಲ್ಲಿ ಬಂದು ‘ಧ್ವನಿ ಕಲಾವಿದರು ‘ ಹಲವಾರು ಕೊರತೆ ಮತ್ತು ವೈರುಧ್ಯಗಳನ್ನು ಎದುರುಸಿದರೂ ಛಲ ಬಿಡದೆ ಕೇವಲ ‘ಶ್ರೇಷ್ಠ ಮತ್ತು ಸತ್ವ ಭರಿತ ‘ ನಾಟಕಗಳ್ಳನ್ನು ಮಾತ್ರ ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದು ಧ್ವನಿಯ ನಿರ್ದೇಶಕ ಮತ್ತು ಕಲಾವಿದರನ್ನು ಪ್ರಶಂಸಿಸಿದರು , ಕಾರ್ಯಕ್ರಮದ ಅಚ್ಚುಕಟ್ಟುತನ ,ಪ್ರತಿಯೊಬ್ಬ ಕಲಾವಿದರುಗಳಪಾಲ್ಗೊಳ್ಳುವಿಕೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು .

ಧ್ವನಿಯ ಹಿರಿಯ ಕಲಾವಿದ ನಾಟಕ ,ಯಕ್ಷಗಾನ ಮತ್ತು ಚಲನಚಿತ್ರ ಕಲಾವಿದರಾದ ವಾಸು ಬಾಯಾರು ಮಾತನಾಡಿ, ರಂಗಭೂಮಿ ಅಳಿವಿಲ್ಲದ ಕಲೆ ಆದರೆ ಉಳಿವು ನಮ್ಮ ಕರ್ತವ್ಯ ಎಂದರು . ರಂಗಭೂಮಿ ಪ್ರೇಕ್ಷಕರ ಕೊರತೆ ಎದುರುಸಿದಾಗ ಇದು ಅಳವಡಿಸಿಕೊಂಡ ಬೇರೆಬೇರೆ ಪ್ರಕಾರಗಳಲ್ಲಿ ಬೀದಿ ನಾಟಕ, ಡೇರೆ ನಾಟಕ ಕಂಪನಿ ನಾಟಕ ಹೀಗೆ ವಿವರಿಸುತ್ತಾ ,ತಾವೇ ಸ್ವತಃ ಪಾತ್ರವಹಿಸಿದ ಒಂದು ವಿಭಿನ್ನ ಶೈಲಿಯ,ಲಾರಿಯಲ್ಲೇ ರಂಗಸ್ಥಳ ಹಾಗಿ ಸಂಚಾರಿ ವೇದಿಕೆಯನ್ನು ಬಳಸಿದ ‘ಲಾರಿ ನಾಟಕ’ ದ ಬಗ್ಗೆ ಮತ್ತದರ ಯಶಸ್ವೀ ೧೦೮ ಪ್ರದರ್ಶನಗಳ ಬಗ್ಗೆ ಮಾತನಾಡಿದರು.

ಕೊನೆಯಲ್ಲಿ ಧ್ವನಿಪ್ರತಿಷ್ಠಾನದ ಅಧ್ಯಕ್ಷರೂ, ಹೆಸರಾಂತ ರಂಗನಿರ್ದೇಶಕರೂ ಆದಂತಹ ಪ್ರಕಾಶ್ ರಾವ್ ಪಯ್ಯಾರ್ ರವರು ರಂಗಭೂಮಿಯ ವಿವಿಧ ಪ್ರಕಾರಗಳ ಬಗ್ಗೆ ಮಾತನಾಡುತ್ತಾ ರಂಗಭೂಮಿ ಕೇವಲ ಮನೋರಂಜನೆಗೆ ಅಲ್ಲ ಮನೋವಿಕಾಸಕ್ಕಾಗಿ ಎಂದು ನುಡಿದರು . ಹಿಂದೆ ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿದ್ದ ರಂಗಭೂಮಿ ಇಂದು ಅದಃಪತನಗೊಂಡು ಕೇವಲ ಹವ್ಯಾಸಿ ಕಲಾವಿದರ ಕೂಟಕ್ಕೆ ಬಂದು ನಿಂತಿದೆ . ಈ ರಂಗಕಲೆಯನ್ನು ಉಳಿಸಿ ಬೆಳೆಸುವ ಮಹತ್ತರದ ಜವಾಬ್ದಾರಿ ಈಗ ಹವ್ಯಾಸಿ ಕಲಾವಿದರ ಹೆಗಲಮೇಲಿದೆ ಎಂದರು .

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧ್ವನಿಯ ಪ್ರತಿಯೊಬ್ಬ ಕಲಾವಿದರೂ ಪಾಲ್ಗೊಂಡು ,ಏಕಪಾತ್ರಾಭಿನಯ ,ಜಾನಪದ ಮತ್ತು ರಂಗಗೀತೆಗಳ ಹಾಡುಗಾರಿಕೆ , ಅನುಕರಣೆ , ಶಾಸ್ತ್ರೀಯ ನೃತ್ಯ ಮತ್ತು ಮೂಕಾಭಿನಯವನ್ನು ಪ್ರದರ್ಶಿಸಿದರು . ಮನೋರಂಜನಾ ಕಾರ್ಯಕ್ರಮದಲ್ಲಿ ಕೆ . ವಿ ಅಡಿಗ , ವಿನಯ್ ಪೂಜಾರ್ ,ಆದೇಶ ಹಾಸನ ,ಸಪ್ನಾ ಕಿರಣ್ , ನರಸಿಂಹನ್ ,ಅಶೋಕ್ ಅಂಚನ್, ರುದ್ರಯ್ಯ , ವಾಸು ಬಾಯಾರು ಭಾಗವಹಿಸಿದರು .ಕಾರ್ಯಕ್ರಮವನ್ನು ರುದ್ರಯ್ಯ ನವಲಿ ಹಿರೇಮಠ ರವರು ಸೊಗಸಾಗಿ ನಿರೂಪಿಸಿದರು .

Comments are closed.