ಕ್ರೀಡೆ

ರಾಜಸ್ಥಾನ್ ವಿರುದ್ಧ ಗೆಲುವಿನ ನಗೆಬೀರಿದ ಚೆನ್ನೈ; ಹ್ಯಾಟ್ರಿಕ್ ಗೆಲುವು

Pinterest LinkedIn Tumblr

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾನುವಾರ ನಡೆದ ಮಗದೊಂದು ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಮೋಘ ಆಟದ ನೆರವಿನಿಂದ (70*) ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಬೆನ್ ಸ್ಟೋಕ್ಸ್ (46) ಹೋರಾಟವು ವ್ಯರ್ಥವೆನಿಸಿದೆ.

ಇಂದು ಚೆನ್ನೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ, ಧೋನಿಯ ಸಮಯೋಚಿತ ಅರ್ಧಶತಕದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 175 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.

ಗೆಲುವಿಗೆ 176 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್, ಬೆನ್ ಸ್ಟೋಕ್ಸ್(46) ಏಕಾಂಗಿ ಹೋರಾಟದ ಹೊರತಾಗಿಯೂ ಎಂಟು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.

ಸವಾಲಿನ ಮೊತ್ತ ಬೆನ್ನಟ್ಟಿದ ರಾಜಸ್ಥಾನ್ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಅಜಿಂಕ್ಯ ರಹಾನೆ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು.

ಚೆನ್ನೈ ಪರ ದೀಪಕ್ ಚಹಾರ್, ಶಾರ್ದೂಕ್ ಥಾಕೂರ್, ಇಮ್ರಾನ್ ತಾಹಿತ್ ಹಾಗೂ ಡ್ವೇನ್ ಬ್ರಾವೋ ತಲಾ ಎರಡು ವಿಕೆಟ್ ಪಡೆದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಧೋನಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Comments are closed.