ಕ್ರೀಡೆ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲು ಕಂಡ ಆರ್‌ಸಿಬಿ; ಸತತ ಸೋಲಿನಿಂದ ಕಂಗೆಟ್ಟ ಕೊಹ್ಲಿ ಪಡೆ

Pinterest LinkedIn Tumblr

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 118 ರನ್ ಅಂತರದ ಹೀನಾಯ ಸೋಲಿಗೆ ಶರಣಾಗಿದೆ.

ಈ ಮೂಲಕ ಐಪಿಎಲ್ 12ರಲ್ಲಿ ಸತತ ಮೂರನೇ ಸೋಲಿಗೆ ಶರಣಾಗಿದೆ. ಅತ್ತ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಹೈದರಾಬಾದ್, ಬಳಿಕದ ಎರಡು ಪಂದ್ಯಗಳನ್ನು ಗೆದ್ದು ಹಳಿಗೆ ಮರಳಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಎಸ್‌ಆರ್‌ಎಚ್ ಆರಂಭಿಕರಾದ ಜಾನಿ ಬೈರ್‌ಸ್ಟೋವ್ (114) ಹಾಗೂ ಡೇವಿಡ್ ವಾರ್ನರ್ (100*) ಸಿಡಿಲಬ್ಬರದ ಶತಕಗಳ ನೆರವಿನಿಂದ ಎರಡು ವಿಕೆಟ್ ನಷ್ಟಕ್ಕೆ 231 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಆದರೆ ರನ್ ಬೆನ್ನಟ್ಟಿದ ಆರ್‌ಸಿಬಿ ಯಾವ ಹಂತದಲ್ಲೂ ಎದುರಾಳಿಗಳಿಗೆ ಸವಾಲಾಗಲೇ ಇಲ್ಲ. ಪರಿಣಾಮ 113 ರನ್‌ಗಳಿಗೆ ಮುಗ್ಗರಿಸಿತ್ತು. ಈ ಮೂಲಕ 118 ರನ್‌ಗಳ ಅತಿ ಹೀನಾಯ ಸೋಲಿಗೆ ಶರಣಾಗುವ ಮೂಲಕ ಭಾರಿ ಮುಖಭಂಗಕ್ಕೊಳಗಾಗಿದೆ.

ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. 22 ರನ್ ಗಳಿಸುವುದರಲ್ಲೇ ಪ್ರಮುಖ ಮೂರು ವಿಕೆಟುಗಳನ್ನು ಕಳೆದುಕೊಂಡು ಹಿನ್ನಡೆಗೊಳಗಾಯಿತು. ಪಾರ್ಥಿವ್ ಪಟೇಲ್ (11), ಶಿಮ್ರಾನ್ ಹೆಟ್ಮಾಯೆರ್ (9) ಹಾಗೂ ಎಬಿ ಡಿ ವಿಲಿಯರ್ಸ್ (1) ಹೀಗೆ ಬಂದು ಹಾಗೆ ಹೋದರು. ಈ ಮೂರು ವಿಕೆಟುಗಳನ್ನು ಕಬಳಿಸಿದ ಮೊಹಮ್ಮದ್ ನಬಿ ಮಾರಕವಾಗಿ ಕಾಡಿದರು.

ಇಲ್ಲಿಗೆ ಆರ್‌ಸಿಬಿ ಪತನ ನಿಲ್ಲಲಿಲ್ಲ. ತಂಡದ ಏಕಮಾತ್ರ ನಿರೀಕ್ಷೆಯಾಗಿದ್ದ ನಾಯಕ ವಿರಾಟ್ ಕೊಹ್ಲಿ (3) ಜತೆಗೆ ಮೊಯಿನ್ ಅಲಿ (2) ಪೆವಿಲಿಯನ್ ಸೇರುವುದರೊಂದಿಗೆ 6.2 ಓವರ್‌ಗಳಲ್ಲೇ 30 ರನ್ ಅಂತರಕ್ಕೆ ಅರ್ಧ ತಂಡವು ಪೆವಿಲಿಯನ್ ಸೇರಿಕೊಂಡಿತು. ಇದರಿಂದ ಹೀನಾಯ ಸೋಲಿನ ಆತಂಕಕ್ಕೊಳಗಾಯಿತು.

ಇನ್ನುಳಿದಂತೆ ಕಾಲಿನ್ ಡಿ ಗ್ರಾಂಡ್‌ಹೋಮ್ (37), ಪ್ರಯಾಸ್ ಬರ್ಮನ್ (19) ಹಾಗೂ ಉಮೇಶ್ ಯಾದವ್ (14) ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಆದರೂ ಹೀನಾಯ ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಅಂತಿಮವಾಗಿ ಆರ್‌ಸಿಬಿ 19.5 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನವನ್ನು ಕಂಡಿತು. ಈ ಮೂಲಕ 118 ರನ್‌ಗಳ ಹೀನಾಯ ಸೋಲಿಗೆ ಶರಣಾಯಿತು. ಹೈದರಾಬಾದ್ ಪರ ಮೊಹಮ್ಮದ್ ನಬಿ ಕೇವಲ 11 ರನ್ ತೆತ್ತು ನಾಲ್ಕು ವಿಕೆಟುಗಳನ್ನು ಕಿತ್ತು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಂದೀಪ್ ಶರ್ಮಾ ಮೂರು ವಿಕೆಟುಗಳನ್ನು ಕಬಳಿಸಿದರು.

Comments are closed.