ಕರ್ನಾಟಕ

ಚಪ್ಪಲಿ ರಾಜಕೀಯ: ಸುಮಲತಾ ಮೊದಲ ಪ್ರತಿಕ್ರಿಯೆ

Pinterest LinkedIn Tumblr


ಮಂಡ್ಯ: ಸಾವಿನ ರಾಜಕೀಯ, ಮಾತಿನ ರಾಜಕೀಯವಾಯ್ತು, ಇದೀಗ ಮಂಡ್ಯ ಚುನಾವಣಾ ಅಖಾಡದಲ್ಲಿ ಚಪ್ಪಲಿ ಪಾಲಿಟಿಕ್ಸ್ ಆರಂಭವಾಗಿತ್ತು. ಇದೀಗ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ವೈರಲ್ ಆಗಿರುವ ವಿಡಿಯೋಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಕಾನೂನು ಉಲ್ಲಂಘನೆ ನಡೆದು ಜೆಡಿಎಸ್ ಅಭ್ಯರ್ಥಿಯ ಸ್ಪರ್ಧೆಯೇ ಅನುಮಾನವಾಗಿದೆ. ಈ ನಡುವೆ ಜನರನ್ನು ಬೇರೆಡೆ ಸೆಳೆಯಲು ಕೆಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ದೊಡ್ಡ ದೊಡ್ಡ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾರ್ಚ್ 20ರಂದು ನಾಮಪತ್ರ ಸಲ್ಲಿಸಲು ಮನೆಯಿಂದ ಹೊರ ಹೋಗುತ್ತಿರುವ ಸಂದರ್ಭದ ಕೆಲ ದೃಶ್ಯಗಳು ವೈರಲ್ ಆಗಿವೆ. ನಾನು ಮತ್ತು ಪುತ್ರ ಅಭಿಷೇಕ್ ಭದ್ರತೆಗಾಗಿ ಗನ್ ಮ್ಯಾನ್ ಗಳನ್ನು ಇಟ್ಟುಕೊಂಡಿಲ್ಲ. ನಾಮಪತ್ರ ಸಲ್ಲಿಸಿದ ಬಳಿಕ ಭದ್ರತೆಗಾಗಿ ಇದೀಗ ಇಬ್ಬರು ಗನ್ ಮ್ಯಾನ್ ಗಳನ್ನು ನೇಮಕ ಮಾಡಲಾಗಿದೆ. ಅಂದು ಚಪ್ಪಲಿಯನ್ನು ನನಗೆ ನಮ್ಮ ಡ್ರೈವರ್ ನೀಡಿದ್ದರು. ನನ್ನ ಬಗ್ಗೆ ಮಾತನಾಡಲು ಕೆಲವರಿಗೆ ಏನೂ ಸಿಗದೇ ಜಿಗುಪ್ಸೆಯಿಂದ ಈ ರೀತಿಯ ವಿಡಿಯೋಗಳನ್ನು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಮಾತಿನ ಚಾಟಿ ಬೀಸಿದರು.

ಏನಿದು ವೈರಲ್ ವಿಡಿಯೋ:
ಮನೆಯಿಂದ ಹೊರಬರುತ್ತಿದ್ದಂತೆಯೇ ಸುಮಲತಾ ತಮ್ಮ ಚಾಲಕನಿಗೆ ಕೆಳಗೆ ಏನೋ ತೋರಿಸುವ ಮೂಲಕ ಸೂಚಿಸುತ್ತಾರೆ. ಆಗ ಚಾಲಕ ಕೆಳಗೆ ಬಗ್ಗಿ ಸುಮಲತಾ ಕಾಲಿಗೆ ಚಪ್ಪಲಿ ತೊಡಿಸಿದ್ದಾರೆ. ಇತ್ತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮದ್ದೂರು ಭಾಗದಲ್ಲಿ ಪ್ರಚಾರ ನಡೆಸಿದ ವೇಳೆ ನಡೆದುಕೊಂಡು ಬರುತ್ತಿದ್ದಾಗ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಹಾಕಲು ಬಂದಿದ್ದಾರೆ. ಆದ್ರೆ ನಿಖಿಲ್ ಅವರನ್ನು ತಡೆದು ತಾನೇ ಚಪ್ಪಲಿ ಹಾಕಿಕೊಂಡು ಅವರನ್ನು ಮುಟ್ಟಿ ಕೈ ಮುಗಿದಿರುವ ವಿಡಿಯೋ ಜೊತೆಗೆ ಸುಮಲತಾರ ದೃಶ್ಯಗಳನ್ನು ಹೊಂದಿಸಿ ಹರಿಬಿಡಲಾಗಿದೆ.

Comments are closed.