ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇವರ ಪ್ರಾಯೋಜಕತ್ವದಲ್ಲಿ ದುಬಾಯಿ ಮತ್ತು ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ವಿಶೇಷವಾಗಿ ವಾರ್ಷಿಕ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ ನೀಡಲು ಉದ್ದೇಶಿಸಿದಂತೆ, 2022-2023 ರ ಸಾಲಿನ ಪ್ರಶಸ್ತಿಗೆ ಯಕ್ಷಗಾನ ಕಲಾವಿದರೂ, ಸಂಘಟಕರಾಗಿಯೂ ಗುರುತಿಸಿಕೊಂಡ, ಪಟ್ಲ ಗುತ್ತು ಮಹಾಬಲ ಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಮಹಾಬಲ ಶೆಟ್ಟರದ್ದು ಬಹುಮುಖ-ಬಹುಶ್ರುತ ಬದುಕು. ಕಲಾವಿದರಾಗಿ, ಸಂಘಟಕರಾಗಿ, ಸಾಂಸ್ಕೃತಿಕ ನೇತಾರರಾಗಿ ಮತ್ತು ವಗೆನಾಡು ದೇವಸ್ಥಾನವನ್ನು ಮುನ್ನಡೆಸಿದ ಭಗವದ್ಭಕ್ತರಾಗಿ ಸಾರ್ಥಕ ಬದುಕು ಸಾಗಿಸಿದವರು.
ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರಾಗಿ, ಭಾಗವತಿಗೆ, ಚೆಂಡೆ-ಮದ್ದಳೆ ಅಭ್ಯಾಸ ಮಾಡಿ ಕುಂಡಾವು, ಸುಂಕದಕಟ್ಟೆ ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿದ ಅನುಭವಿ ಕಲಾವಿದ. ಮಲ್ಲ ಶ್ರೀ ದುರ್ಗಾಪರಮೇಶ್ವರೀ ಮೇಳವನ್ನು 4 ವರ್ಷ ಕಾಲ ಸಂಚಾಲಕರಾಗಿ ಮುನ್ನಡೆಸಿದ ಸಮರ್ಥ ಸಂಘಟಕ.
ಬಂಟ್ವಾಳ ತಾಲೂಕಿನ ಕರೋಪಾಡಿಗ್ರಾಮದ ಪಟ್ಲಗುತ್ತು ಮಹಾಬಲ ಶೆಟ್ಟರ ಜನ್ಮಭೂಮಿ. ವಗೆನಾಡಿನ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘದ ಸ್ಥಾಪಕರಾಗಿ ಹಲವು ವರ್ಷಗಳಿಂದ ಶ್ರಾವಣ ಮಾಸ ಪೂರ್ತಿಯ ನಿರಂತರ ತಾಳಮದ್ದಳೆ, ಭಜನೆ, ಸತ್ಸಂಗ ಕಾರ್ಯಕ್ರಮಗಳ ಸಂಯೋಜನೆ ಮೂಲಕ ಮನೆಮಾತಾದವರು ಶ್ರೀಯುತ ಶೆಟ್ಟರು. ವಗೆನಾಡನ್ನೆ ಕೇಂದ್ರವಾಗಿಸಿ, ನಾಡಿನ ಉದ್ದ ಅಗಲಕ್ಕೂ ಕೀರ್ತಿಹಬ್ಬಿಸಿದ ಇವರ ಸಾಂಸ್ಕೃತಿಕ ಸಂಘಟನಾ ಕೌಶಲ್ಯ ಅನ್ಯರಿಗೆ ಮಾದರಿ. 80 ವಸಂತಗಳನ್ನು ಉತ್ತರಿಸಿ ಮುನ್ನಡೆಯುತ್ತಿರುವ ಇವರದ್ದು ಯುವಕರನ್ನೂ ನಾಚಿಸುವ ಕ್ರಿಯಾಶೀಲ ಬದುಕು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟರಂತ ಧ್ರುವತಾರೆಯನ್ನು ಯಕ್ಷಗಾನಾಂಬೆಯ ಮಡಿಲಿಗೆ ಅರ್ಪಿಸಿ, ಸಾರ್ಥಕ್ಯ ಪಡೆದ ಗೌರವಾನಿತ್ವ ತಂದೆಯೆನ್ನುವುದು ಇವರಿಗೊಂದು ಹೆಮ್ಮೆಯ ಸಂಗತಿ. ಪ್ರಸ್ತುತ ಧರ್ಮಪತ್ನಿ ಲಲಿತಾ ಶೆಟ್ಟಿಯವರೊಂದಿಗೆ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ.
ಪ್ರಶಸ್ತಿ ಪುರಸ್ಕ್ರತ ಪಟ್ಲಗುತ್ತು ಮಹಾಬಲ ಶೆಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸುವ ಜೊತೆಗೆ, ಅವರ ಶೇಷ ಜೀವನ ಸುಖ, ಸಂತೋಷ, ಸಮೃದ್ಧಿಗಳಿಂದ ನಡೆವಂತೆ, ಅವರ ಕೈಯಿಂದ ಇನ್ನಷ್ಟು ಕಲಾ -ಸಾಮಾಜಿಕ-ಧಾರ್ಮಿಕ ಸೇವೆ ನಡೆವಂತೆ ನಾವು ಪೂಜಿಸುವ ಕಲಾಮಾತೆ ಕಟೀಲು ದುರ್ಗಾಪರಮೇಶ್ವರಿ, ಮಹಾಗಣಪತಿ ಮತ್ತು ಈ ವರ್ಷ ಯಕ್ಷರಾಧನೆಯಿಂದ ಕೊಂಡಾಡಲ್ಪಡುವ ಜಗತ್ಪತಿ ಮಹಾವಿಷ್ಣು ಸದಾ ಅನುಗ್ರಹಪೂರ್ವಕ ಹರಸಲೆಂದು ಸಮಸ್ತ ದುಬಾಯಿಯ ಯಕ್ಷಕಲಾರಾಧಕರ ಪರವಾಗಿ ಹಾರೈಕೆ.
ಇದೇ ಬರುವ ಜೂನ್ 11, 2023ರ ರವಿವಾರ ಮಧ್ಯಾಹ್ನ 2 ಗಂಟೆಗೆ ದುಬಾಯಿಯ ಶೇಖ್ ರಶೀದ್ ಅಡಿಟೋರಿಯಂನಲ್ಲಿ “ವಿಶ್ವ ಪಟ್ಲ ಸಂಭ್ರಮ” ಮತ್ತು “ದುಬಾಯಿ ಯಕ್ಷೋತ್ಸವ 2023” ಇದರ ಅಂಗವಾಗಿ ನಡೆಯಲಿರುವ “ದಶಾವತಾರ” ಯಕ್ಷಗಾನ ಪ್ರದರ್ಶನದ ವೇದಿಕೆಯಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ, ಈ ವಿಶೇಷ ಪ್ರಶಸ್ತಿಯನ್ನು ನೀಡಿ ಪಟ್ಲಗುತ್ತು ಮಹಾಬಲ ಶೆಟ್ಟಿಯವರನ್ನು ಗೌರವಿಸಲಾಗುವುದೆಂದು ದುಬಾಯಿ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ಕೊಟ್ಟಿಂಜ ದಿನೇಶ ಶೆಟ್ಟಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭವಾನಿಶಂಕರ ಶರ್ಮ, ವೆಂಕಟೇಶ ಶಾಸ್ತ್ರಿ ಪುತ್ತಿಗೆ, ಗಿರೀಶ್ ನಾರಾಯಣ್ ಕಾಟಿಪಳ್ಳ, ಶ್ರೀಮತಿ ಮತ್ತು ಶ್ರೀ ಜಯಾನಂದ ಪಕ್ಕಳ, ವಸಂತ ಶೆಟ್ಟಿ ಬಾಳೆಪುಣಿಗುತ್ತು, ಪ್ರಕಾಶ್ ಪಕ್ಕಳ, ರಾಜೇಶ್ ಕುತ್ತಾರು, ಬಾಲಕೃಷ್ಣ ಶೆಟ್ಟಿ ಮಾಡೂರುಗುತ್ತು, ವಿಜಯ ಶೆಟ್ಟಿ, ಅಲ್ಲದೆ ಕೇಂದ್ರದ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶರತ್ ಕುಡ್ಲ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.