ಗಲ್ಫ್

ಮಸ್ಕತ್ : ಸಂಭ್ರಮದ ಬಾಂಧವ್ಯದ ಬೆಸುಗೆ; ಅನಿವಾಸಿಗರಿಗೆ ಬಾಲ್ಯದ ನೆನಪು ತಂದ ಕುಟುಂಬ ಸಮ್ಮಿಲನ

Pinterest LinkedIn Tumblr

ಮಸ್ಕತ್ : ಅನಿವಾಸಿ ಕರಾವಳಿ ಕನ್ನಡಿಗರ ಯುವ ತಂಡ ‘ಟೀಮ್ ಬಾಂಧವ್ಯ’ದ ವತಿಯಿಂದ ಸಂಭ್ರಮದ *ಬಾಂಧವ್ಯ -2019* ಕುಟುಂಬ ಸಮ್ಮಿಲನ ಕಾರ್ಯಕ್ರಮವು ಇಲ್ಲಿನ ಬರ್ಕ ಫಾರ್ಮ್ ಹೌಸ್ ನಲ್ಲಿ ನಡೆಯಿತು. ಅಪ್ಪಟ ಗ್ರಾಮೋತ್ಸವ ಮಾದರಿಯ ಬಾಂಧವ್ಯ ಕಾರ್ಯಕ್ರಮವು ಅನಿವಾಸಿಗರಿಗೆ ಬಾಲ್ಯದ ನೆನಪು, ಸಂತೆ ಜಾತ್ರೆ, ಡೊಂಬರಾಟ, ಸಾಂಸ್ಕೃತಿಕ ಸಂಜೆ, ಹೋಬಳಿ ಖಾದ್ಯ, ವಿನೋದ ಕ್ರೀಡೆಗಳ ಮೂಲಕ ಮತ್ತೊಮ್ಮೆ ಅವಿಸ್ಮರಣೀಯವನ್ನಾಗಿಸುವಲ್ಲಿ ಯಶಸ್ವಿಯಾಯಿತು.

ಸಂಜೆ 4 ಗಂಟೆಗೆ ಮಕ್ಕಳ ಆಟೋಟದೊಂದಿಗೆ ಆರಂಭಗೊಂಡ ಬಾಂಧವ್ಯ ಗ್ರಾಮೋತ್ಸವದಲ್ಲಿ ಊರಿನ ಶೈಲಿಯ ಗೂಡಂಗಡಿ, ಆಮ್ಲೆಟು- ಚರುಂಬುರಿ, ಪುಲಿ ಶರಬತ್ತು, ಪೋಡಿ ಗೋಲಿಬಜೆ ಮುಂತಾದ ತಿಂಡಿ ಅಂಗಡಿಗಳು ಪ್ರಮುಖ ಆಕರ್ಷಣೆಯಾಗಿದ್ದವು. ಮಹಿಳೆಯರಿಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಬಾಂಧವ್ಯ 2019ರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತ ಎ. ಕೆ. ಅಶ್ರಫ್ ಮಾತನಾಡಿ, ಅನಿವಾಸಿ ಭಾರತೀಯರ ನಡುವೆ ಏರ್ಪಡಿಸಿರುವ ಬಾಂಧವ್ಯದ ಬೆಸುಗೆಯು ನಮ್ಮ ದೇಶದಾದ್ಯಂತ ವ್ಯಾಪಿಸಬೇಕಾಗಿದೆ. ಮಾನವೀಯತೆಯ ಬಾಂಧವ್ಯದಿಂದ ದ್ವೇಷ ರಾಜಕೀಯವನ್ನು ಸೋಲಿಸಬಹುದು. ಇಂದು ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ಮನುಷ್ಯರ ನಡುವೆ ವೈಷಮ್ಯವನ್ನು ಬಿತ್ತಲಾಗುತ್ತಿದೆ. ಇಂತಹ ಬಾಂಧವ್ಯದ ಪರಿಕಲ್ಪನೆಯು ನೈಜ ಭಾರತೀಯತೆಯನ್ನು ಉಳಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಪ್ರವಾಸಿ ಫೋರಮ್ ಅಧ್ಯಕ್ಷ ಅನ್ವರ್ ಮೂಡಬಿದ್ರೆ, ಸಾಮಾಜಿಕ ಧುರೀಣ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು. ಬಾಂಧವ್ಯದ ಸಂಚಾಲಕ ಆಸಿಫ್ ಬೈಲೂರ್ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಶಾಕಿರ್ ಸ್ವಾಗತಿಸಿ, ಸುಹಾಝ್ ಧನ್ಯವಾದ ಸಲ್ಲಿಸಿದರು. ಝಕರಿಯ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು.

ಬಾಂಧವ್ಯದ ಪ್ರಯುಕ್ತ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ದೇಶದ ಪ್ರಸಕ್ತ ಸನ್ನಿವೇಶವನ್ನು ವಿವರಿಸುವ ನಾಟಕವನ್ನು ಟೀಮ್ ಬಾಂಧವ್ಯ ಕಲಾವಿದರು ನೆರವೇರಿಸಿಕೊಟ್ಟರು. ಅದೇ ರೀತಿ ‘ಮುಶಾಯಿರಾ ಕ ಏಕ್ ನಝಾರ’ ಎಂಬ ವಿಶಿಷ್ಟ ಶೈಲಿಯ ಬಹುಭಾಷಾ ಕವಿಗೋಷ್ಠಿಯಲ್ಲಿ ಆಸಿಫ್ ಪಡುಬಿದ್ರೆ, ಅನ್ಸಾರ್ ಕಾಟಿಪಳ್ಳ, ಅಬ್ದುಲ್ ರಹ್ಮಾನ್ ನಿಟ್ಟೆ, ಫಯಾಝ್ ಎನ್. ಹಾಗು ಬಿಹಾರದ ಶಾ ನವಾಝ್ ಆಲಮ್ ಭಾಗವಹಿಸಿದ್ದರು.

ಬಾಂಧವ್ಯಕ್ಕೆ ಆಗಮಿಸಿದ ಸಾವಿರದಷ್ಟು ಜನರಿಗೆ ಟೀಮ್ ಬಾಂಧವ್ಯದ ಬಾಣಸಿಗರು ಮೈದಾನದಲ್ಲೇ ಅಡುಗೆ ತಯಾರಿಸಿ ಬಡಿಸಿದ್ದು ಕಾರ್ಯಕ್ರಮದ ಇನ್ನೊಂದು ವಿಶೇಷವಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ಸೀ ಪರ್ಲ್ ಗೋಲ್ಡ್ ಆಂಡ್ ಡೈಮಂಡ್ ಜ್ಯುವೆಲ್ಲರೀಸ್, ಎಸಿಎಂಇ ಬಿಲ್ಡಿಂಗ್ ಮೆಟೀರಿಯಲ್ಸ್ ಕಂಪೆನಿ, ಒಮಾನ್ ಪ್ರೈವೇಟ್ ಸ್ಕೂಲ್, ಟ್ರಾವೆಲ್ ಮೇಟ್ ಟೂರ್ಸ್ ಆಂಡ್ ಟ್ರಾವೆಲ್ಸ್ ಪಾಣೆಮಂಗಳೂರು, ಅಲ್ ವಹ್ಜಾ ಟ್ರೇಡಿಂಗ್, ಪ್ರಾಣ್ ಫುಡ್ ಪ್ರೊಡಕ್ಟ್ಸ್, ಚಾರ್ ಮಿನಾರ್ ರೆಸ್ಟೋರೆಂಟ್ ಮುಂತಾದ ಸಂಸ್ಥೆಗಳು ಸಹಕರಿಸಿದ್ದವು.

Comments are closed.