ಕನ್ನಡ ವಾರ್ತೆಗಳು

ಕೊಲೆಗೆ ಸಂಚು : ಮಂಗಳೂರಿನ ಸಿಸಿಬಿ ಪೊಲೀಸರಿಂದ ಮೂರು ಆರೋಪಿಗಳ ಸೆರೆ

Pinterest LinkedIn Tumblr

ಮಂಗಳೂರು,ಮೇ.13 : ಮೂಡಬಿದಿರೆ ಸ್ವರಾಜ್‌ ಮೈದಾನ್‌ ಬಳಿ ವ್ಯಕ್ತಿಯೋರ್ವರ ಕೊಲೆಗೆ ಸಂಚು ರೂಪಿಸಿದ ಮೂರು ಯುವಕರನ್ನು ಮಂಗಳೂರಿನ ಸಿಸಿಬಿ ಪೊಲೀಸರು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.

ಬಂಧಿತ ಆರೋಪಿಗಳನ್ನು ಕುಂಜತ್ತಬೈಲ್‌ ದೆಪ್ಪುಣಿಗುತ್ತು ನಟರಾಜ್‌ ಯಾನೆ ನಟು (25), ಕುಂಜತ್ತಬೈಲ್‌ ಜ್ಯೋತಿ ನಗರದ ರವಿರಾಜ್‌ (29) ಮತ್ತು ಕಾವೂರು ಜ್ಯೋತಿ ನಗರದ ಸುಭಾಷ್‌ (23)  ಎಂದು ಗುತುತಿಸಲಾಗಿದ್ದು, ಇವರಿಂದ 2 ತಲವಾರುಗಳು, ಡ್ರಾಗರ್‌ ಹಾಗೂ ಮಾರುತಿ ಆಮ್ನಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಯ ವಿವರ :
ಬುಧವಾರ ಸಂಜೆ ಈ ಹಿಂದೆ ಕೊಲೆ ಯತ್ನ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೆಲವು ಮಂದಿ ಆರೋಪಿಗಳು ಮೂಡಬಿದಿರೆ ಸ್ವರಾಜ್‌ ಮೈದಾನ್‌ ಬಳಿ ಬಿಳಿ ಬಣ್ಣದ ಮಾರುತಿ ಆಮ್ನಿ ಕಾರಿನಲ್ಲಿ ಯಾವುದೋ ದುಷ್ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿಯಂತೆ ಮಂಗಳೂರಿನ ಸಿಸಿಬಿ ಪೊಲೀಸ್‌ ಇನ್‌ಸ್ಪೆಕ್ಟರ್‌ ವೆಲೆಂಟೈನ್‌ ಡಿ’ಸೋಜಾ ಮತ್ತು ಸಿಬಂದಿ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಮೂರು ಆರೋಪಿಗಳನ್ನು ಕ್ರಿಮಿನಲ್‌ ಹಿನ್ನೆಲೆಯುಳ್ಳವರಾಗಿದ್ದು, ನಟರಾಜ್‌ ಯಾನೆ ನಟು ಈ ಹಿಂದೆ ಮಂಗಳೂರಿನ ಬಂದರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಹಾಗೂ ರವಿರಾಜ್‌ ಕಾವೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ 2 ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಸುಭಾಷ್‌ ಈ ಹಿಂದೆ ಪಣಂಬೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಕೊಲೆ ಯತ್ನ ಪ್ರಕರಣವೊಂದರಲ್ಲಿ ಭಾಗಿಯಾಗಿರುವುದು ಸಾಭಿತಾಗಿದೆ. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಮೂಡಬಿದಿರೆ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್‌ ಕಮಿಷನರ್‌ ಎಂ. ಚಂದ್ರಶೇಖರ್‌ ಅವರ ಆದೇಶದಂತೆ ಡಿಸಿಪಿ ಕೆ.ಎಂ. ಶಾಂತರಾಜು ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಇನ್‌ಸ್ಪೆಕ್ಟರ್‌ ವೆಲೆಂಟೈನ್‌ ಡಿ’ಸೋಜಾ ಮತ್ತು ಸಿಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Write A Comment