ಕನ್ನಡ ವಾರ್ತೆಗಳು

ಸಂಘಟನೆ ಮೂಲಕ ಸಹಬಾಳ್ವೆ ಸಾಧ್ಯ – ಶ್ರೀ ದಿನಕರ ಶೆಟ್ಟಿ

Pinterest LinkedIn Tumblr

child_schol_bag

ಮಂಗಳೂರು,ಮೇ .07 : ಯುವಕ ಮಂಡಲಗಳು ತಮ್ಮ ಪರಿಸರದಲ್ಲಿ ಜನಹಿತ ಕಾರ್ಯಗಳನ್ನು ಸಂಘಟಿಸುವುದರ ಮೂಲಕ ‘ಸಹಬಾಳ್ವೆ’ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು. ಜಾತಿ ಧರ್ಮಗಳ ವೈಷಮ್ಯವನ್ನು ಸೌಹಾರ್ದಯುತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಯುವ ಸಂಘಟನೆಯನ್ನು ತೊಡಗಿಸಿಕೊಳ್ಳಬೇಕೆಂದು ಪಾಂಡೇಶ್ವರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀ ದಿನಕರ ಶೆಟ್ಟಿ ಹೇಳಿದ್ದಾರೆ.

ಅವರು ನಗರದ ಸೂಟರ್‌ಪೇಟೆಯಲ್ಲಿ ನಡೆದ ಪ್ರಜ್ವಲ್ ಯುವಕ ಮಂಡಲದ ಹನ್ನೊಂದನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಮಕ್ಕಳಿಗೆ ಪುಸ್ತಕ ವಿತರಿಸಿ ಅವರು ಮಾತನಾಡಿದರು. ಪ್ರಜ್ವಲ್ ಯುವಕ ಮಂಡಲ ಕೇವಲ ವಾರ್ಷಿಕೋತ್ಸವ, ಮನರಂಜನೆಗೆ ಮಾತ್ರ ಸೀಮಿತವಾಗಿರದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ ಪುಸ್ತಕ ವಿತರಿಸುತ್ತಿರುವ ಕಾರ್ಯವನ್ನು ನಿರಂತರವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಖ್ಯ ಅತಿಥಿಯಾಗಿ ಮಾತನಾಡಿ ಯುವ ಸಂಘಟನೆಗಳಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಯುವ ಸಂಘಟನೆಗಳು ಪರಿಣಾಮಕಾರಿಯಾಗಿ ಸಮಾಜದ ಏಳಿಗೆಗಾಗಿ ಕೆಲಸ ಮಾಡಬೇಕೆಂದರು. ಸಮಾರಂಭದ ಅಧ್ಯಕ್ಷತೆಯನ್ನು ಕಚ್ಚೂರು ಮಾಲ್ತಿದೇವಿ ಹಾಗೂ ಬಬ್ಬುಸ್ವಾಮಿ ಮೂಲಕ್ಷೇತ್ರ ಬಾರ್ಕೂರು, ಇದರ ಆಡಳಿತ ಸಮಿತಿ ಅಧ್ಯಕ್ಷರು, ನಿವೃತ್ತ ತಹಶೀಲ್ದಾರರಾದ ಶ್ರೀ.ಪಿ.ಬಾಬು ಇವರು ವಹಿಸಿದ್ದರು.

ಸಮಾರಂಭದಲ್ಲಿ ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್, ಬ್ಯಾಂಕ್ ಆಫ್ ಇಂಡಿಯಾ ಕುಳಾ ಶಾಖೆಯ ಮೆನೇಜರ್ ಶ್ರೀ ಸಂತೋಷ್ ಉಳ್ಳಾಲ್, ಚೈತನ್ಯ
ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಶ್ರೀ.ಎಸ್.ಕೃಷ್ಣ, ಉದ್ಯಮಿ ಶ್ರೀ ಚಿತ್ತರಂಜನ್ ಎಕ್ಕೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಅನಿಲ್, ಪದಾಧಿಕಾರಿಗಳಾದ ಶ್ರೀ ಮಹೇಶ್ ಕುಮಾರ್, ಶ್ರೀ ರಘುನಾಥ್, ಶ್ರೀ ಜಗನ್ನಾಥ್, ಶ್ರೀ ಆಲ್ವಿನ್, ಶ್ರೀ ರವೀಂದ್ರ, ಶ್ರೀ ಶರತ್, ಶ್ರೀ ಕಿಶೋರ್, ಶ್ರೀ ಪ್ರಮೋದ್, ಶ್ರೀ ಲಕ್ಷ್ಮಣ್, ಶ್ರೀ ಶಕೀತ್ ರಾಜ್, ಶ್ರೀ ಸುಧಾಕರ್ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕುಳಾ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ಕೆ.ಪೇಜಾವರ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸುತ್ತಿರುವ ನೆಲ್ಸನ್ ಅನಿಲ್ ಮಸ್ಕರೇನಸ್ ಅವರನ್ನು ಸನ್ಮಾನಿಸಲಾಯಿತು. ಸುಮಾರು ೨೫೦ಕ್ಕೂ ಹೆಚ್ಚಿನ ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಯಿತು.

ಗೌರವ ಸಲಹೆಗಾರರಾದ ಶ್ರೀ ಕೆ.ಕೆ.ಪೇಜಾವರ ಸ್ವಾಗತಿಸಿದರು. ಸೃಜನ್ ಪೇಜಾವರ ವಂದಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದ ಬಳಿಕ ‘ನೃತ್ಯ ವೈಭವ’ ಹಾಗೂ ಅಧಿತಿ ಕಲಾವಿದರು ಕೈಕಂಬ ಇವರಿಂದ ನಾಟಕ ಪ್ರದರ್ಶಿಸಲ್ಪಟ್ಟಿತು.

Write A Comment