ಕನ್ನಡ ವಾರ್ತೆಗಳು

ಇಂಗ್ಲೆಂಡ್‌ಗೆ ಮಂಗಳೂರಿನಲ್ಲಿ ವೀಸಾ ಸೌಲಭ್ಯ : ಮೇ 2ರಂದು ವೀಸಾ ಆಕಾಂಕ್ಷಿಗಳ ಸಂದರ್ಶನ

Pinterest LinkedIn Tumblr

England_Visa_Global

ಮಂಗಳೂರು, ಎ.30: ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ನಗರದ ಗ್ಲೋಬ್ ಟ್ರಾವೆಲ್ಸ್‌ನಿಂದ ಇಂಗ್ಲೆಂಡ್ (ಯುನೈಟೆಡ್ ಕಿಂಗ್‌ಡಮ್)ಗೆ ಮಂಗಳೂರಿನಲ್ಲೇ ವೀಸಾ ಸೌಲಭ್ಯ ದೊರಕಲಿದೆ. ಇಂಗ್ಲೆಂಡ್‌ನ ರಾಯಭಾರ ಸಂಸ್ಥೆಯಿಂದ ಮಂಗಳೂರಿನಲ್ಲಿ ಮೇ 2ರಂದು ವೀಸಾ ಆಕಾಂಕ್ಷಿಗಳ ಸಂದರ್ಶನ ನಡೆಯಲಿದೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇಂಗ್ಲೆಂಡ್‌ನ ರಾಯಭಾರ ಕಚೇರಿ ಆರಂಭಗೊಂಡಿದ್ದು, ಅದಕ್ಕಿಂತ ಮೊದಲು ರಾಜ್ಯದ ವೀಸಾ ಆಕಾಂಕ್ಷಿಗಳು ವೀಸಾ ಅರ್ಜಿ ಮತ್ತು ಇತರ ದಾಖಲೆಗಳನ್ನು ಸಲ್ಲಿಸಲು ಚೆನ್ನೈಗೆ ತೆರಳಬೇಕಾಗಿತ್ತು. ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಚೆನ್ನೈ ಅಥವಾ ಬೆಂಗಳೂರಿಗೆ ತಮ್ಮ ವೀಸಾ ಅರ್ಜಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವುದು ಹಾಗೂ ರಾಯಭಾರ ಕಚೇರಿಗಳಲ್ಲಿ ಬಯೋ ಮೆಟ್ರಿಕ್‌ಗಾಗಿ ಅಲ್ಲಿ ರಾತ್ರಿ ಹಗಲು ಉಳಿಯಬೇಕಾದ ಸನ್ನಿವೇಶವೂ ನಿರ್ಮಾಣವಾಗಿತ್ತು.

ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಹಾಗು ಸಮಯ, ಹಣ ಖರ್ಚಾಗುತ್ತಿತ್ತು. ಆದರೆ ಈಗ ಭಾರತಾದ್ಯಂತ ತನ್ನ ಸಹ ಕಚೇರಿಗಳನ್ನು ಹೊಂದಿರುವ ಹಾಗೂ ಕೆನಡಾ ಮತ್ತು ಅಮೆರಿಕದಲ್ಲೂ ತನ್ನ ಶಾಖೆಗಳನ್ನು ಹೊಂದಿರುವ ಗ್ಲೋಬ್ ಟ್ರಾವೆಲ್ಸ್‌ನ ಮನವಿಯ ಮೇರೆಗೆ ಮಂಗಳೂರಿನಲ್ಲಿಯೇ ಸಾರ್ವಜನಿಕರಿಂದ ವೀಸಾ ಅರ್ಜಿಮತ್ತು ಬಯೋಮೆಟ್ರಿಕ್ ಪಡೆಯಲು ಇಂಗ್ಲೆಂಡ್‌ನ ರಾಯಭಾರ ಕಚೇರಿಯು ಮುಂದಾಗಿದೆ.

ಪ್ರಮುಖವಾಗಿ ಕೆನಡಾ, ಅಮೆರಿಕ, ಇಂಗ್ಲೆಂಡ್ ಮತ್ತು ಯೂರೋಪ್ ಸೇರಿದಂತೆ ವಿವಿಧ ಹೊರ ರಾಷ್ಟ್ರಗಳ ಪ್ರವಾಸೋದ್ಯಮ ಪ್ರವರ್ತಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗ್ಲೋಬ್ ಟ್ರಾವೆಲ್ಸ್‌ನ ದೀರ್ಘಕಾಲೀನ ಬೇಡಿಕೆಗೆ ಇಂಗ್ಲೆಂಡ್ ರಾಯಭಾರ ಕಚೇರಿ ಸ್ಪಂದಿಸಿ ತಮ್ಮ ಪ್ರತಿನಿಧಿ ಸಂಸ್ಥೆಯಾದ ವಿಎಫ್‌ಎಸ್ ಗ್ಲೋಬಲ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಮಂಗಳೂರಿನಿಂದ ವೀಸಾ ಅರ್ಜಿಗಳು ಹಾಗೂ ಬಯೋ ಮೆಟ್ರಿಕ್ ಪಡೆಯಲು ಅನುಮತಿ ನೀಡಿದೆ.

ಗ್ಲೋಬ್ ಟ್ರಾವೆಲ್ಸ್ ಸಂಸ್ಥೆಯು ಈ ಹಿಂದೆ, ಸುಬ್ಬಯ್ಯ ಶೆಟ್ಟಿಯವರ ನಾಯಕತ್ವದಲ್ಲಿ ಬಿಲ್ಡರ್ಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಮಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ಯಾನ ಸೌಲಭ್ಯವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಬಜ್ಪೆ ಹಳೆ ವಿಮಾನ ನಿಲ್ದಾಣದಲ್ಲಿ ಇಂಟರ್‌ನ್ಯಾಷನಲ್ ಟರ್ಮಿನಲ್ ನಿರ್ಮಾಣಕ್ಕಾಗಿ ಉದ್ಯಮಿಗಳಿಂದ ಹಣ ಸಂಗ್ರಹಿಸುವಲ್ಲಿಯೂ ಸುಬ್ಬಯ್ಯ ಶೆಟ್ಟಿ ಹಾಗೂ ಗ್ಲೋಬ್ ಟ್ರಾವೆಲ್ಸ್‌ನ ವಿಲಿಯಂ ಡಿಸೋಜಾ ಅವರು ಕಾಳಜಿ ವಹಿಸಿದ್ದರು.

ಅಂತಾರಾಷ್ಟ್ರೀಯ ವಿಮಾನಗಳ ನಿರ್ವಹಣಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವಲ್ಲಿ ಹಳೆ ಅಂತಾರಾಷ್ಟ್ರೀಯ ಟರ್ಮಿನಲನ್ನು ಖುದ್ದಾಗಿ ಪರಿಶೀಲನೆ ಮಾಡಿರುವ ಕಾರಣದಿಂದ ದಾಖಲೆಯ 15 ದಿನಗಳಲ್ಲೇ ಟರ್ಮಿನಲ್ ನಿರ್ಮಾಣಕ್ಕೆ ಸಾಧ್ಯವಾಯಿತು. ಇದರಿಂದ ಮಂಗಳೂರಿನಿಂದ ಮಧ್ಯ ಏಷ್ಯಾಕ್ಕೆ ಹಲವಾರು ಅಂತಾರಾಷ್ಟ್ರೀಯ ವಿಮಾನಗಳು ನಿತ್ಯ ನಿರ್ವಹಣೆಗೆ ಕಾರಣವಾಗಿದೆ. ಇಂಗ್ಲೆಂಡ್‌ಗೆ ವೀಸಾ ಬಯಸುವ ಮಂಗಳೂರಿಗರು ಗ್ಲೋಬ್ ಟ್ರಾವೆಲ್ಸ್‌ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Write A Comment