ಕರ್ನಾಟಕ

ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಕೆ ವಿವಾದದಲ್ಲಿ ಸಿಎಂ ಆಪ್ತ ಶಾಸಕ ಎಂ.ಕೆ.ಸೋಮಶೇಖರ್

Pinterest LinkedIn Tumblr

somaಮೈಸೂರು ,ಏ.29-ನಗರದ ಕೆ.ಆರ್ ಕ್ಷೇತ್ರದ ಕಾಂಗ್ರೆಸ್‌ನ ಹಾಲಿ ಶಾಸಕ ಎಂ.ಕೆ.ಸೋಮಶೇಖರ್ ಪರಿಶಿಷ್ಟ ಜಾತಿ ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಮಾಡಿರುವ ಆರೋಪ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಭಾರೀ ವಿವಾದ ಸೃಷ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರೆಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಸೋಮಶೇಖರ್ ಅವರ ಮೇಲೆ ವಿವಾದ ಬಂದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಪ್ರಕರಣ ಇದೀಗ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಜಿಲ್ಲೆಯ ಜನತೆ ಎದುರು ನೋಡುತ್ತಿದೆ. ಕಾನೂನಿನ ಪ್ರಕಾರ ಯಾವುದೇ ಒಬ್ಬ ಜನಪ್ರತಿನಿಧಿ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಶಿಕಾರ್ಹ ಅಪರಾಧ.

ಇದೀಗ ಎಂಕೆಎಸ್ ಕಾನೂನಿನ ಕುಣಿಕೆಗೆ ಸಿಲುಕಿರುವುದರಿಂದ ಅವರ ಶಾಸಕ ಸ್ಥಾನ ರದ್ದಾಗಲಿದೆಯೇ ಇಲ್ಲವೇ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆಯೇ ಎಂಬ ಮಾತುಗಳು ಮೈಸೂರಿನಾದ್ಯಂತ ಕೇಳಿಬರುತ್ತಿವೆ. ಜಿಲ್ಲಾಧಿಕಾರಿ ಶಿಖಾ ನೀಡಿರುವ ವರದಿ ಸೋಮಶೇಖರ್ ರಾಜಕೀಯ ಭವಿಷ್ಯವನ್ನೇ ಅಲುಗಾಡುವಂತೆ ಮಾಡಿದೆ. ಮುಂದೆ ಅವರು ಕಾನೂನು ಸಮರ ನಡೆಸುವರೇ ಇಲ್ಲವೇ ಸಾರ್ವಜನಿಕವಾಗಿ ತಪ್ಪು ಒಪ್ಪಿಕೊಂಡು ಶಿಕ್ಷೆಗೆ ಗುರಿಯಾಗುವರೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ಮುಖ್ಯಮಂತ್ರಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಎಂ.ಕೆ.ಸೋಮಶೇಖರ್ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿರುವುದು ಜಿಲ್ಲಾಧಿಕಾರಿಗಳು ನಡೆಸಿದ ಪರಿಶಿಷ್ಟ ಜಾತಿ, ಪಂಗಡದ ಪ್ರಮಾಣಪತ್ರ ಪರಿಶೀಲನೆ ವೇಳೆ ದೃಢಪಟ್ಟಿರುವುದರಿಂದ ಕಾಂಗ್ರೆಸ್ ವಲಯದಲ್ಲಿ ಸಂಚಲನವುಂಟು ಮಾಡಿದೆ.

ಘಟನೆ ವಿವರ:

ಎಂ.ಕೆ.ಸೋಮಶೇಖರ್ ಅವರು ಗ್ಯಾಸ್ ಎಜೆನ್ಸಿ ಆರಂಭಿಸಲು ಅನುಮಪತಿ ಪಡೆಯಲು ಹಾಗೂ ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ತಾವು ಪರಿಶಿಷ್ಟ ಜಾತಿಗೆ ಸೇರುವ ಜೇನುಕುರುಬ ಎಂದು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದರು. ಇವರು ಸಲ್ಲಿಸಿರುವ ಪ್ರಮಾಣ ಪತ್ರ ನಕಲಿಯಾಗಿದ್ದು, ಅವರು ಕುರುಬ ಸಮಾಜಕ್ಕೆ ಸೇರಿರುವವರು. ಕಾಡುಕುರುಬರಲ್ಲ ಎಂದು ಎನ್.ಸಿ.ಚಿಕ್ಕಣ್ಣ ಎಂಬುವರು ದೂರು ನೀಡಿದ್ದರು.

ಈ ದೂರಿನ ಅರ್ಜಿಯನ್ನು ವಿಚಾರಣೆ ನಡೆಸಿದ ಮೈಸೂರು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ, ಶಾಸಕ ಎಂ.ಕೆ.ಸೋಮಶೇಖರ್ ನಕಲಿ ಜಾತಿಪ್ರಮಾಣಪತ್ರ ಸಲ್ಲಿಸಿ ಸವಲತ್ತು ಪಡೆದಿರುವ ಅಂಶವನ್ನು ಎತ್ತಿ ಹಿಡಿದಿದೆ. ಈ ಪ್ರಕರಣ ಮುಖ್ಯಮಂತ್ರಿಗೂ ಮುಜುಗರ ಸೃಷ್ಟಿಸಿದ್ದು ಮುಂದೆ ಯಾವ ತಿರುವು ಪಡೆಯುತ್ತದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

Write A Comment