ಕನ್ನಡ ವಾರ್ತೆಗಳು

ಮಂಗಳೂರಿನ ಹಲವೆಡೆ 144 ಸೆಕ್ಷನ್ ಜಾರಿ : ಮೆರವಣಿಗೆ,ಪ್ರತಿಭಟನೆ ನಿಷೇಧ

Pinterest LinkedIn Tumblr

ಮಂಗಳೂರು, ಎ. 29: ನಗರದಲ್ಲಿ ಯಾವೂದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತ ಕ್ರಮವಾಗಿ ಮಂಗಳೂರು ಉತ್ತರ, ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.

ಪಣಂಬೂರು ಠಾಣಾ ವ್ಯಾಪ್ತಿ ಹೊರತು ಪಡಿಸಿ ಕೊಣಾಜೆ, ಉಳ್ಳಾಲ, ಪಾಂಡೇಶ್ವರ, ಮಂಗಳೂರು ಗ್ರಾಮಾಂತರ, ಬಂದರ್, ಬರ್ಕೆ, ಕದ್ರಿ ಮತ್ತು ನಗರದ ಇತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜ್ಯಾರಿಗೊಳಿಸಲಾಗಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಸಂಜೆ 6ರ ವರೆಗೆ ಸೆಕ್ಷನ್ ಜಾರಿಯಲ್ಲಿರುತ್ತದೆ. ಈ ಸಂದರ್ಭ ಯಾವುದೇ ಮೆರವಣಿಗೆ, ಪ್ರತಿಭಟನೆ ನಡೆಸಲು ಅವಕಾಶ ಇರುವುದಿಲ್ಲ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಉಳ್ಳಾಲ ಹಾಗೂ ಇನ್ನಿತರ ಕಡೆಗಳಲ್ಲಿ ನಡೆದ ಚೂರಿ ಇರಿತ, ತಲವಾರು ದಾಳಿ ಮುಂತಾದ ಘಟನೆಗಳ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಯಾವೂದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದರೂ ನಿಷೇಧಾಜ್ಞೆಗೆ ನಿರ್ಧಿಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.

ಇನ್ನೊಂದು ಮೂಲದ ಪ್ರಕಾರ ಸಿಸಿಬಿ ಪೊಲೀಸರು ಯುವಕನೋರ್ವನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿರುವ ಪಿಎಫ್ಐ ಸಂಘಟನೆಯು ಇದನ್ನು ವಿರೋಧಿಸಿ ಇಂದು ಸಂಜೆ 3 ಗಂಟೆಗೆ ನಗರದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾವೂದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತ ಕ್ರಮವಾಗಿ ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರತಿಭಟನೆ ಮುಂದೂಡಿಕೆ..

ಉಳ್ಳಾಲದಲ್ಲಿ ನಡೆದಿರುವ ಅಹಿತಕರ ಘಟನೆಗಳಿಂದಾಗಿ ಹೆಚ್ಚಿನ ಭದ್ರತೆ ನೀಡುವ ಸಲುವಾಗಿ ಪೊಲೀಸ್ ಸಿಬ್ಬಂದಿಗಳನ್ನು ಅಲ್ಲಿಗೆ ನಿಯೋಜಿಸಿರುವುದರಿಂದ ತಮ್ಮ ಪ್ರತಿಭಟನೆಯನ್ನು ಮುಂದೂಡುವಂತೆ ಪೊಲೀಸ್ ಅಧಿಕಾರಿಗಳು ವಿನಂತಿಸಿದ ಮೇರೆಗೆ ನಾವು ಇಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಮುಂದೂಡಿರುತ್ತೇವೆ ಎಂದು ಇದೇ ಸಂದರ್ಭದಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.

Write A Comment