ಕನ್ನಡ ವಾರ್ತೆಗಳು

ಉಳ್ಳಾಲ ದರ್ಗಾದ ಆಡಳಿತ ವಿವಾದ:ವಕ್ಪ್ ಅಧಿಕಾರಿಯಿಂದ ಕಛೇರಿ ಲಾಕ್ ಔಟ್ / ಹಂಗಾಮಿ ಅಧ್ಯಕ್ಷ ರಶೀದ್ ಬೆಂಬಲಿಗರಿಂದ ವಕ್ಫ್ ಅಧಿಕಾರಿ ಮೇಲೆ ಕಲ್ಲು ತೂರಾಟ

Pinterest LinkedIn Tumblr

Ullala_darga_galate_2

ಮಂಗಳೂರು / ಉಳ್ಳಾಲ, ಎಪ್ರಿಲ್.29: ಉಳ್ಳಾಲ ದರ್ಗಾದ ಆಡಳಿತ ಸಮಿತಿ ಆಯ್ಕೆ ವಿಚಾರದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡು ವರ್ಕ್ಫ ಅಧಿಕಾರಿ ದರ್ಗಾದ ಕಛೇರಿಗೆ ಸೀಲ್ ಹಾಕಿ ಲಾಕ್ ಔಟ್ ಮಾಡಿದ್ದನ್ನು ವಿರೋಧಿಸಿದ ಒಂದು ಗುಂಪಿನವರು ಅಧಿಕಾರಿ ಮೇಲೆ ಕಲ್ಲು ತೂರಿದ್ದಾರೆ.

ಜಮಾ‌ಅತರ ಒತ್ತಡಕ್ಕೆ ಮಣಿದ ಸಮಿತಿಯಿಂದ ಉಳ್ಳಾಲ ದರ್ಗಾದಲ್ಲಿ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ನೂತನ ಅಧ್ಯಕ್ಷರಾಗಿ ಮಾಜಿ ಮಂಡಲ ಪ್ರಧಾನ, ಹಾಜಿ ಅಬ್ದುಲ್ ರಶೀದ್ ಅವರ ಆಯ್ಕೆ ನಡೆದಿತ್ತು. ದರ್ಗಾ ಅಧ್ಯಕ್ಷರ ಅವಧಿ ಮೂರು ವರ್ಷ ಪೂರ್ಣಗೊಂಡು ದರ್ಗಾ ಅಧೀನದಲ್ಲಿರುವ ಜಮಾ‌ಅತಿನ ಪ್ರತಿನಿಧಿಗಳ ಆಯ್ಕೆ ಬಳಿಕ ನೂತನ ಅಧ್ಯಕ್ಷರ ಆಯ್ಕೆ ನಿಟ್ಟಿನಲ್ಲಿ ಮಂಗಳವಾರ ಬೆಳಗ್ಗೆ ಸಭೆ ಕರೆಯಲಾಗಿತ್ತು. ನಿಕಟಪೂರ್ವ ಅಧ್ಯಕ್ಷ ಯು.ಎಸ್.ಹಂಝ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್ ಹಾಗೂ ಕೋಶಾಧಿಕಾರಿ ಹಾಜಿ ಮಹಮ್ಮದ್ ಅವರು ಎಲ್ಲಾ 49 ಸದಸ್ಯರಿಗೆ ನೋಟಿಸ್ ಕಳುಹಿಸಿದ್ದರು.

Ullala_darga_galate_5

ಬೆಳಗ್ಗೆ 10 ಗಂಟೆಗೆ ಸರಿಯಾಗಿ 27 ಸದಸ್ಯರು ಆಗಮಿಸಿದ್ದು, ನಿಕಟಪೂರ್ವ ಅಧ್ಯಕ್ಷ ಯು.ಎಸ್.ಹಂಝ ಹಾಗೂ ಖಾಝಿಯವರು ಗೈರಾಗಿದ್ದರು. 12 ಗಂಟೆವರೆಗೆ ಕಾದರೂ ಅವರ ಉಪಸ್ಥಿತಿ ಇರಲಿಲ್ಲ. ಈ ಸಂದರ್ಭ ನೂತನ ಸಮಿತಿ ರಚಿಸುವಂತೆ ಸೇರಿದ್ದ ಜಮಾತರು ಪಟ್ಟು ಹಿಡಿದರು.

ಪರಿಸ್ಥಿತಿಯ ಗಂಭೀರತೆ ಅರಿತ ಪ್ರ.ಕಾರ್ಯದರ್ಶಿ ಯು.ಟಿ.ಇಲ್ಯಾಸ್ ಅವರು ಯು.ಎಸ್.ಹಂಝ ಅವರಿಗೆ ಕರೆ ಮಾಡಿದಾಗ ಬೆಂಬಲ ಹೆಚ್ಚು ಇರುವವರನ್ನು ಅಧ್ಯಕ್ಷರನ್ನಾಗಿಸಿ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಹಾಜರಿದ್ದ 27 ಸದಸ್ಯರ ಒಮ್ಮತದ ಆಯ್ಕೆಯಂತೆ ಹಾಜಿ ಅಬ್ದುಲ್ ರಶೀದ್ ಅವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಬಳಿಕ ಯು.ಟಿ.ಇಲ್ಯಾಸ್ ಅವರಿಗೆ ನಿಕಟಪೂರ್ವ ಅಧ್ಯಕ್ಷರು ದೂರವಾಣಿ ನೀಡಿದ ಸಲಹೆಯಂತೆ ಅಧಿಕಾರ ಹಸ್ತಾಂತರಿಸಿದರು. ಆರಂಭದಲ್ಲಿ ಇದು ಹಂಗಾಮಿ ಅಧ್ಯಕ್ಷ ಸ್ಥಾನ ಎಂದು ಹೇಳಲಾಯಿತು.

ಒಂದು ಹಂತದ ಆಯ್ಕೆ ಮುಗಿದಿದ್ದರೂ ಸಂಜೆ ಆರು ಗಂಟೆಗೆ ಖಾಝಿಯವರು ದರ್ಗಾಕ್ಕೆ ಆಗಮಿಸಿ ಕೆಲವು ಮಂದಿಯನ್ನು ಸೇರಿಸಿ ಸಭೆ ನಡೆಸಿದರು. ಕೆಲವು ಹೊತ್ತಿನ ಬಳಿಕ ಹೊರಬಂದು ಅಧ್ಯಕ್ಷ ಸ್ಥಾನಕ್ಕೆ ಬುಖಾರಿ ಹಾಗೂ 9 ಮಂದಿಯನ್ನು ಸಮಿತಿಗೆ ಆರಿಸಲಾಗಿದೆ ಎಂದು ಘೋಷಿಸಿದರು. ಈ ಸಂದರ್ಭ ಈಗಾಗಲೇ ಅಧ್ಯಕ್ಷರ ಆಯ್ಕೆ ನಡೆದಿದೆ, ಅಲ್ಲದೆ ವಕ್ಫ್ ಮಂಡಳಿ ಬೈಲಾ ಪ್ರಕಾರ ಧಾರ್ಮಿಕ ವಿಚಾರ ಹೊರತುಪಡಿಸಿ ಆಡಳಿತ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರ ಖಾಝಿಗಿಲ್ಲ ಎನ್ನುವುದನ್ನು ತಿಳಿಸಲಾಯಿತು.

Ullala_darga_galate_3 Ullala_darga_galate_4

ಇದಕ್ಕೆ ಖಾಝೀ ಒಪ್ಪದಿದ್ದಾಗ ಪರಿಸ್ಥಿತಿ ಬಿಗಡಾಯಿಸುವ ಲಕ್ಷಣ ಇದ್ದ ಹಿನ್ನೆಲೆಯಲ್ಲಿ ಕಮೀಷನರ್ ಆದೇಶದ ಮೇರೆಗೆ ಬಜ್ಪೆ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ದರ್ಗಾಕ್ಕೆ ಆಗಮಿಸಿ ಖಾಝಿ, ನಿಕಟಪೂರ್ವ ಅಧ್ಯಕ್ಷ ಯು.ಎಸ್.ಹಂಝ, ಹಾಲಿ ಅಧ್ಯಕ್ಷ ಅಬ್ದುಲ್ ರಶೀದ್, ಯು.ಟಿ.ಇಲ್ಯಾಸ್, ತ್ವಾಹಾ ಹಾಜಿ, ಆಸಿಫ್ ಅಬ್ದುಲ್ಲಾ, ನೌಷಾದ್ ಅಲಿ ಹಾಗೂ ಫಾರೂಕ್ ಉಳ್ಳಾಲ್ ಜೊತೆ ಮಾತುಕತೆ ನಡೆಸಿದರು. ನೂತನ ಅಧ್ಯಕ್ಷರನ್ನು ಕಾನೂನು ರೀತಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದ್ದರಿಂದ ಸಮಸ್ಯೆ ಪರಿಹಾರವಾಗಿತ್ತು. ಈ ನಿಟ್ಟಿನಲ್ಲಿ ಬುಧವಾರ ನೂತನ ಪದಾಧಿಕಾರಿಗಳ ಆಯ್ಕೆಯೂ ನಡೆದಿತ್ತು.

ಆದರೆ ಗುರುವಾರ ಸಂಜೆಯಿಂದ ಮತ್ತೆ ಆಡಳಿತಾತ್ಮಕವಾಗಿ ವಿವಾದ ಭುಗಿಲೆದ್ದು ಎರಡೂ ತಂಡದವರ ನಡುವೆ ಮಾತಿನ ಚಕಮಕಿ ನಡೆದಿದೆ.ರಶೀದ್ ಬಣದವರು ಸಚಿವ ಯು.ಟಿ ಖಾದರ್ ಅವರು ಎಸ್‌ಎಸ್‌ಎಫ್ ನವರೊಂದಿಗೆ ಸೇರಿ ಕ್ಷೇತ್ರದಲ್ಲಿ ವಿನಾ ಕಾರಣ ಗಲಾಟೆ ಎಬ್ಬಿಸುತ್ತಿದಾರೆಂದು ಆರೋಪಿಸಿದ್ದಾರೆ.ಅಲ್ಲದೆ ಸಚಿವ ಖಾದರ್ ವಿರುದ್ಧ ಧಿಕ್ಕಾರ ಕೂಗಿದ ಘಟನೆಯೂ ನಡೆಯಿತು.ಕೊನೆಗೆ ವಕ್ಫ್ ಬೋರ್ಡ್ ಅಧಿಕಾರಿ ಅಬ್ಬೂಬಕ್ಕರ್ ಅವರು ಪೊಲೀಸರ ಸಮಕ್ಷಮದಲ್ಲಿ ದರ್ಗಾದ ಆಡಳಿತ ಕಛೇರಿಗೆ ಸೀಲ್ ಹಾಕಿ ಲಾಕ್ ಔಟ್ ಮಾಡಿದರು ಈ ವೇಳೆ ಉದ್ರಿಕ್ತ ರಶೀದ್ ಬೆಂಬಲಿಗರ ಗುಂಪು ಅಬ್ಬೂಬಕ್ಕರ್ ಮೇಲೆ ಕಲ್ಲೂ ತೂರಾಟ ನಡೆಸಿದ್ದು ಪೊಲೀಸರು ಅವರನ್ನು ಸುರಕ್ಷಿತವಾಗಿ ವಾಪಸ್ ರವಾಣಿಸಿದ್ದಾರೆ.

Write A Comment