ಕನ್ನಡ ವಾರ್ತೆಗಳು

ಸಾಯಲೆಂದು ನೀರಿಗೆ ಬಿದ್ದರೂ ಪವಾಡಸದೃಶ್ಯರಾಗಿ ಬದುಕಿಬಂದ ಹಾವೇರಿ ಮೂಲದ ವ್ಯಕ್ತಿ

Pinterest LinkedIn Tumblr

ವರದಿ- ಯೋಗೀಶ್ ಕುಂಭಾಸಿ

ಕುಂದಾಪುರ: “ಸಂಸಾರಗಳ ಇಕ್ಕಟ್ಟಿಗೆ ಸಿಲುಕಿದ ಮೇಲೆ ಬದುಕು ಚಿಂತೆಯಿಂದ ಕೂಡುತ್ತದೆ, ನನ್ನ ಈ ಪ್ರಾಯದಲ್ಲಿ ಚಿಂತೆ ಅನುಭವಿಸುವ ಧೈರ್ಯ, ಉತ್ಸಾಹ ನನಗಿಲ್ಲ, ಏನೋ ಬದುಕಿನಲ್ಲಿ ಜಿಗುಪ್ಸೆ ಉಂಟಾಯಿತು. ಸಾಯುವ ನಿರ್ಧಾರ ಮಾಡಿದೆ, ಹೊಳೆಯಲ್ಲಿ ಬಿದ್ದಿದ್ದು ಮಾತ್ರ ಗೊತ್ತು, ಸತ್ತಿರುವೆ ಅಂದುಕೊಂಡಿದ್ದೆ, ದಡಕ್ಕೆ ಬಂದ ಮೇಲೆ ತಿಳಿಯಿತು, ನಾನು ಸಾಯ್ಲಿಲ್ಲ ಅಂತಾ”- ಎನ್ನುತ್ತಾ ಮುಖದಲ್ಲಿ ಮಂದಹಾಸ ಬೀರುತ್ತಾ ಮಾತನಾಡುತ್ತಿದ್ದ ಆ ಇಳಿಜೀವಕ್ಕೆ 70 ರ ಆಸುಪಾಸಿನ ವಯಸ್ಸು.

kundapur_Haveri_Man Rescue (2) kundapur_Haveri_Man Rescue (4)

ಹೆಸರು ಕರಿಯಪ್ಪ. ಹಾವೇರಿಯ ವಿದ್ಯಾನಗರ ಮೂಲದ ಆಸಾಮಿ ಇವರು. ಓದಿದ್ದು ಬಿ.ಎ. ಎಲ್.ಎಲ್.ಬಿ. ಸುಮಾರು 22 ವರ್ಷಗಳ ಕಾಲ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗ ಮಾಡಿ ನಿವ್ರತ್ತಿ ಹೊಂದಿದ ಬಳಿಕ ಮನೆಯಲ್ಲಿಯೇ ಕುಟುಂಬದ ಜೊತೆ ಇವರ ಜೀವನ ಸಾಗುತ್ತಿತ್ತು. ಪತ್ನಿ, ಇಬ್ಬರು ಪುತ್ರಿಯರು ಓರ್ವ ಪುತ್ರ ಇದ್ದಾರೆ. ಹೆಣ್ಣುಮಕ್ಕಳಿಬ್ಬರಿಗೆ ಮದುವೆ ಮಾಡಿಕೊಟ್ಟಿದ್ದು ಪುತ್ರ ರಾಷ್ಟ್ರೀಯ ಪಕ್ಷವೊಂದರಲ್ಲಿ ಮುಂಚೂಣಿಯಲ್ಲಿದ್ದಾರೆ.

kundapur_Haveri_Man Rescue (1) kundapur_Haveri_Man Rescue (2) kundapur_Haveri_Man Rescue (4)

ಅದ್ಯಾಕೋ ಏನೋ ಮುನಿಸಿಕೊಂಡು ಐನೂರು ರೂಪಾಯಿಗಳೊಂದಿಗೆ ಮನೆಬಿಟ್ಟ ಕರಿಯಪ್ಪ ಹಾವೇರಿಯಿಂದ ಮಂಗಳೂರು ಬಸ್ಸು ಹತ್ತಿದ್ದರು. ಮಂಗಳೂರಿಗೆ ಬಂದು ಅಲ್ಲಿ ಬಸ್ಸು ನಿಲ್ದಾಣದಲ್ಲಿ ತಂಗಿದ್ದ ಅವರು ಗುರುವಾರ ಬೆಳಿಗ್ಗೆ ಉಪಹಾರವನ್ನೂ ಮಾಡದೇ ಮಂಗಳೂರು-ಶಿರಸಿ ಸರಕಾರಿ ಬಸ್ಸನ್ನು ಏರಿದ್ದರು. ಇತ್ತ ತಂದ ಕಾಸು ಖಾಲಿಯಾದ ಕಾರಣ ಕೈಯಲ್ಲಿದ್ದ ಹಣದಲ್ಲಿ ಕುಂದಾಪುರಕ್ಕೆ ಟಿಕೇಟ್ ಮಾಡಿದ್ದರು. ಬಸ್ಸು ಕುಂದಾಪುರದತ್ತ ಸಾಗಿ ಅಲ್ಲಿನಿಂದ ಶಿರಸಿ ದಾರಿ ಹಿಡಿಯುವ ವೇಳೆ ತಲ್ಲೂರು ಬ್ರಿಡ್ಜ್ ಸಮೀಪ ಕರಿಯಪ್ಪ ಒಮ್ಮೆಲೆ ಇಳಿಯುವ ಬಗ್ಗೆ ನಿರ್ವಾಹಕ(ಕಂಡಕ್ಟರ್) ಬಳಿ ಕೇಳಿಕೊಂಡಿದ್ದಾರೆ. ಅದಕ್ಕೆ ನಿರ್ವಾಹಕ ಬಸ್ಸು ನಿಲ್ಲಿಸಿ ಕರಿಯಪ್ಪ ಅವರನ್ನು ಕೆಳಗಿಳಿಸಿದ್ದಾರೆ.

ಬಸ್ಸಿನಿಂದ ಇಳಿದ ಕರಿಯಪ್ಪ ಹಿಂದೆಮುಂದೆ ನೋಡದೇ ಸೇತುವೆ ಮೇಲೆ ನಿಂತು ನೂರಾರು ಅಡಿ ಆಳದ ಹೊಳೆಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅಸಾಯಕರಾಗಿದ್ದು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು ಸ್ಥಳಕೆ ಧಾವಿಸಿದ ಕುಂದಾಪುರ ಪೊಲೀಸರು ಸ್ಥಳೀಯ ಮೀನುಗಾರರು ಮತ್ತು ಬೋಟ್ ಸಹಕಾರದಿಂದ ಕರಿಯಪ್ಪ ಅವರ ಬಳಿ ತೆರಳುವಾಗ ಅಂದಾಜು ಮುಕ್ಕಾಲು ಗಂಟೆ ಕ್ರಮಿಸಿತ್ತು.

ನೀರಿನಲ್ಲಿ ತೇಲುತ್ತಿದ್ದ ಕರಿಯಪ್ಪ..
ನೀರಿಗೆ ಬಿದ್ದ ತತ್ ಕ್ಷಣದಲ್ಲಿ ಎಲ್ಲರೂ ಅವರನ್ನು ಉಳಿಸುವ ಬಗ್ಗೆ ಪ್ರಯತ್ನ ಮಾಡಿದರಾದರೂ ನೀಡಿನಲ್ಲಿ ಕೊಚ್ಚಿಹೋದ ಕರಿಯಪ್ಪ ತುಂಬಾ ದೂರ ಹೋಗಿದ್ದಾರೆ. ಅಲ್ಲದೇ ನೀರಿನ ಮೇಲ್ಭಾಗದಲಿ ತೇಲುತ್ತಿದ್ದದ್ದನ್ನು ಕಂಡ ಎಲ್ಲರೂ ಕರಿಯಪ್ಪ ಸತ್ತಿರಬಹುದೆಂದು ಭಾವಿಸಿದ್ದರಾದರೂ ಸ್ಥಳಕ್ಕೆ ಹೋದ ಬೋಟಿನವರು ಪರಿಕ್ಷಿಸುವಾಗ ಕರಿಯಪ್ಪ ಮಾಮೂಲಿನಂತೆ ಉಸಿರಾಡುತ್ತಿದ್ದರು.

ನಾನು ಸತ್ತಿಲ್ಲವೇ?
ತನ್ನನ್ನು ರಕ್ಷಿಸಲು ಬಂದ ಬೀಟ್ ಹಾಗೂ ಪೊಲೀಸರ ಬಳಿ ಕರಿಯಪ್ಪ ಕೇಳಿದ ಪ್ರಶ್ನೆ “ ಸಾಯಲು ನೀರಿಗೆ ಬಿದ್ದೆ, ನಾನು ಯಾಕೆ ಸತ್ತಿಲ್ಲ”? ಎಂದು. ಕರಿಯಪ್ಪನವರನ್ನು ರಕ್ಷಿಸಿದ ಪೊಲಿಸರು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅವರ ಮನೆಯವರಿಗೂ ವಿಚಾರವನ್ನು ಮುಟ್ಟಿಸಿದ್ದಾರೆ. ಮಾಧ್ಯಮಕ್ಕೆ ಮಾತಿಗೆ ಸಿಕ್ಕ ಕರಿಯಪ್ಪ ಸಂತಸದಿಂದಲೇ ಮಾತನಾಡುತ್ತಾ ‘ಇನ್ನು ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ’ ಎಂದಿದ್ದಾರೆ.

ಕರಿಯಪ್ಪನವರ ಇಂಗ್ಲೀಷ್ ಮಾತುಗಳು, ಅವರಿಗಿರುವ ಅನುಭವಗಳು ನಿಜಕ್ಕೂ ಅವರ ಬಳಿ ಮಾತನಾಡಿದವರನ್ನು ನಿಬ್ಬೆರಗಾಗಿಸಿತ್ತು. ಸಾಯಲು ಹೋದ ಕರಿಯಪ್ಪ ಪವಾಢಸದೃಶ್ಯರಾಗಿ ಬದುಕಿಬಂದಿದ್ದು ಇನ್ನೊಂದು ಅಚ್ಚರಿಯ ಸಂಗತಿ.

Write A Comment