ಅಂತರಾಷ್ಟ್ರೀಯ

ತನ್ನ ಮಗುವಿಗೆ ‘ಬ್ಲಷ್‌’ ಎಂದು ಹೆಸರಿಟ್ಟ ಕ್ರಿಸ್‌ ಗೇಲ್

Pinterest LinkedIn Tumblr

Gayle

ನವದೆಹಲಿ: ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್‌ಗೇಲ್ ಅಪ್ಪನಾಗಿದ್ದಾರೆ. ಸದ್ಯ ಐಪಿಎಲ್ ನಲ್ಲಿ ಆರ್‌ಸಿಬಿ ತಂಡದ ಸದಸ್ಯರಾಗಿರುವ ಗೇಲ್ ತನ್ನ ಪ್ರೇಯಸಿ ನತಾಶಾ ಬೆರಿಡ್ಜ್ ಹೆಣ್ಣು ಮಗುವಿಗೆ ಜನ್ಮ ನೀಡಲಿರುವ ಸುದ್ದಿ ತಿಳಿದು ಕೆಲ ದಿನಗಳ ಹಿಂದೆಯಷ್ಟೇ ಭಾರತದಿಂದ ತಾಯ್ನಾಡಿಗೆ ಮರಳಿದ್ದರು.

ಹೆಣ್ಣು ಮಗುವಿನ ಅಪ್ಪನಾಗಿರುವ ಸಂತಸವನ್ನು ಕ್ರಿಸ್‌ ಗೇಲ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಎರಡು ಗಂಟೆಗಳ ಹಿಂದೆಯಷ್ಟೇ ನನ್ನ ಮುದ್ದು ಮಗಳು ಬ್ಲಷ್ ಳನ್ನು ನಾವಿಬ್ಬರು ಈ ಜಗತ್ತಿಗೆ ಸ್ವಾಗತಿಸಿದ್ದೇವೆ. ಇದು ತುಂಬಾ ಸಂತಸದ ಕ್ಷಣ. ಗಟ್ಟಿಗತ್ತಿ ತಾಶಾಳಿಗೆ ನನ್ನೊಲುಮೆ ಎಂಬ ಪೋಸ್ಟ್‌ನೊಂದಿಗೆ ಪ್ರೇಯಸಿ ನತಾಶಾಳೊಂದಿಗಿರುವ ಫೋಟೋವೊಂದನ್ನು ಗೇಲ್ ಗುರುವಾರ ಶೇರ್ ಮಾಡಿದ್ದಾರೆ.

36ರ ಹರೆಯದ ಗೇಲ್ ಏಪ್ರಿಲ್ 25ಕ್ಕೆ ವಾಪಸ್ ಬಂದು ಆರ್‌ಸಿಬಿಗೆ ಜತೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗೇಲ್ ಮಗಳಿಗೆ ‘ಬ್ಲಷ್’ ಎಂದು ಹೆಸರಿಟ್ಟಿದ್ದು ಯಾಕೆ?
ಕಳೆದ ವರ್ಷ ಜನವರಿಯಲ್ಲಿ ನಡೆದ ಬಿಗ್ ಬ್ಯಾಶ್ ಲೀಗ್ (ಬಿಬಿಎಲ್) ನಲ್ಲಿ ಚಾನೆಲ್ 10 ನ ಮ್ಯಾಕಲಾಲಿನ್ ಎಂಬ ಪತ್ರಕರ್ತೆಯೊಂದಿಗೆ ಗೇಲ್ ಅನುಚಿತ ವರ್ತನೆ ತೋರಿದ್ದರು.

ನಾನು ನಿನಗೆ ಸಂದರ್ಶನವನ್ನು ನೀಡಲು ಬಯಸುತ್ತೇನೆ. ನಿನ್ನ ಕಣ್ಣುಗಳನ್ನು ನೋಡುವುದಕ್ಕಾಗಿಯೇ ನಾನಿಲ್ಲಿದ್ದೇನೆ. ಈ ಪಂದ್ಯವನ್ನು ನಾವು ಗೆಲ್ಲುತ್ತೇವೆ. ಇದಾದನಂತರ ಕುಡಿಯೋಣ. ಡೋಂಟ್ ಬ್ಲಷ್ ಬೇಬಿ ಎಂದು ಹೇಳುವ ಮೂಲಕ ಗೇಲ್ ವಿವಾದಕ್ಕೊಳಾಗಿದ್ದರು.

ಮರುದಿನ ತಾನು ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿಲ್ಲ. ನಾನು ಬೇರೆ ಉದ್ದೇಶಿದಿಂದ ಆಕೆಯೊಂದಿಗೆ ಮಾತನಾಡಿಲ್ಲ ಎಂದು ಗೇಲ್ ಕ್ಷಮೆಯಾಚಿಸಿದ್ದರು.

ಆದಾಗ್ಯೂ, ಗೇಲ್ ಪತ್ರಕರ್ತೆಯೊಂದಿಗೆ ವರ್ತಿಸಿದ ರೀತಿ ವಿವಾದ ಸೃಷ್ಟಿಸಿದ್ದರಿಂದ ಆತನಿಗೆ 10,000 ಡಾಲರ್ ದಂಡ ತೆರಬೇಕಾಗಿ ಬಂದಿತ್ತು. ‘ಡೋಂಟ್ ಬ್ಲಷ್ ಬೇಬಿ’ ವಿವಾದ ನೆನಪಿಗಾಗಿಯೇ ಇದೀಗ ತನ್ನ ಮಗಳಿಗೆ ಬ್ಲಷ್ ಎಂದು ಹೆಸರಿಟ್ಟು ಗೇಲ್ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

Write A Comment