ಕನ್ನಡ ವಾರ್ತೆಗಳು

ಬಾಳಿಗ ಮರ್ಡರ್ ಕೇಸ್ : ಇಂದು ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

Pinterest LinkedIn Tumblr

Baliga_naresh_shenoy

ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ. ಪಿ. ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಬೇಕಾಗಿರುವ ಶಂಕಿತ ಆರೋಪಿ ಯುವ ಬ್ರಿಗೇಡ್‌‌‌‌ನ ನರೇಶ್ ಶೆಣೈ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಇಂದು ಮಂಗಳೂರು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.

ಬಾಳಿಗ ಹತ್ಯೆ ಪ್ರಕರಣದಲ್ಲಿ ನರೇಶ್ ಶೆಣೈಯನ್ನು ಪ್ರಶ್ನಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ ಪ್ರಕರಣದ ಬಳಿಕ ನರೇಶ್ ಶೆಣೈ ತಲೆಮರೆಸಿಕೊಂಡಿರುವುದರಿಂದ ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದರು. ನರೇಶ್ ಶೆಣೈ ಪರ ವಕೀಲರು ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

ಮಾ.21ರಂದು ಮುಂಜಾನೆ 5.೩೦ರ ಸುಮಾರಿಗೆ ಪಿವಿಎಸ್ ಕಲಾಕುಂಜಾದ ಬಳಿಯ ತಮ್ಮ ನಿವಾಸದಿಂದ ದೇವಸ್ಥಾನಕ್ಕೆ ಹೊರಡುತ್ತಿದ್ದ ವೇಳೆ ಮನೆಯ ಸಮೀಪದಲ್ಲೇ ಬಾಳಿಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.ಇದೀಗ ವಿನಾಯಕ ಬಾಳಿಗ ಕೊಲೆ ಪ್ರಕರಣ ನಡೆದು ನಾಳೆಗೆ ಒಂದು ತಿಂಗಳು ಪೂರ್ಣಗೊಳ್ಳಲಿದೆ.

ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿ ನರೇಶ್ ಶೆಣೈ ಜೊತೆ ಇವರ ಸ್ನೇಹಿತರಾದ ಶ್ರೀಕಾಂತ್ ಹಾಗೂ ವಿಘ್ನೇಶ್ ಕೂಡಾ ತಲೆ ಮರೆಸಿಕೊಂಡಿದ್ದಾರೆ. ಶ್ರೀಕಾಂತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ನರೇಶ್ ಶೆಣೈ ಹಾಗೂ ಶ್ರೀಕಾಂತ್ ವಿರುದ್ಧ ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಈ ನಡುವೆ ಪೊಲೀಸರಿಗೆ ಸವಾಲಾಗಿರುವ ಈ ಪ್ರಕರಣದ ಉಳಿದ ಆರೋಪಿಗಳ ಶೋಧ ಮುಂದುವರಿದಿದೆ.

ಬಾಳಿಗ ಕೊಲೆ ಪ್ರಕರಣ :ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ವರದಿ ನೀಡಲು ಸೂಚನೆ

ಇದೇ ಸಂದರ್ಭದಲ್ಲಿ ಆರ್‌ಟಿಎ ಕಾರ್ಯಕರ್ತ ವಿನಾಯಕ ಪಿ.ಬಾಳಿಗ ಅವರ ಕೊಲೆಯ ಹಿಂದಿರುವವರನ್ನು ಕಂಡುಹಿಡಿದು ಕಾನೂನು ರೀತಿಯಲ್ಲಿ ಶೀಘ್ರ ಕ್ರಮ ವಹಿಸಿ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ವರದಿ ನೀಡುವಂತೆ ಆಯೋಗದ ಆಯುಕ್ತ ಎಲ್.ಕೃಷ್ಣಮೂರ್ತಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರಿಗೆ ಸೂಚಿಸಿದ್ದಾರೆ.

Write A Comment