ಕನ್ನಡ ವಾರ್ತೆಗಳು

ದ್ವಿತೀಯ ಹಂತದ ಎಡಿಬಿ ಯೋಜನೆ – 280 ಕೋಟಿ ರೂ. ವೆಚ್ಚದಲ್ಲಿ ನಗರ ಪ್ರದೇಶದ ಅಭಿವೃದ್ಧಿ : ಪೊನ್ನುರಾಜ್

Pinterest LinkedIn Tumblr

Mcc_meet_photo_1

ಮಂಗಳೂರು,ಎ.20: ಸುಮಾರು 280 ಕೋಟಿ ರೂ. ವೆಚ್ಚದಲ್ಲಿ ನಗರ ಪ್ರದೇಶದಲ್ಲಿ ದ್ವಿತೀಯ ಹಂತದ ಎಡಿಬಿ ಯೋಜನೆಯ ಕುರಿತಂತೆ ಪ್ರಾಥಮಿಕ ವಿನ್ಯಾಸ ವರದಿ ಸಿದ್ಧಗೊಂಡಿದೆ ಎಂದು ಕೆ ಐ ಯು ಡಿ ಎಫ್ ಸಿ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ಹಂತದ ಎಡಿಬಿ ಯೋಜನೆಯ ಕುರಿತ ಸದಸ್ಯರ ಅಭಿಪ್ರಾಯ ಸಂಗ್ರಹದ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆಯ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆಗೊಂಡ ಬಳಿಕ ವಿಸ್ಕೃತ ಯೋಜನಾ ವರದಿ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಪ್ರಥಮ ಹಂತದಲ್ಲಿ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿ ಹಲವಾರು ಸಮಸೈಗಳಿವೆ. ಇವೆಲ್ಲವನ್ನು ಸರಿಮಾಡಿಕೊಂಡು ಮುಂದುವರಿಯುವ ಯೋಜನೆ ಇದ್ದು, ಈ ಬಗ್ಗೆ ಎಲ್ಲಾ ವಾರ್ಡ್‌ಗಳ ಸದಸ್ಯರು ತಮ್ಮ ಅಗತ್ಯ ಬೇಡಿಕೆಗಳ ನೀಲಿ ನಕ್ಷೆ ತಯಾರು ಮಾಡಬೇಕು. ಇದನ್ನು ಅಧಿಕಾರಿಗಳು ವಾರ್ಡ್ ಮಟ್ಟದಲ್ಲಿ ಪರಿಶೀಲಿಸಬೇಕು ಎಂದು ಪೊನ್ನುರಾಜ್ ಸಲಹೆ ನೀಡಿದರು.

Mcc_meet_photo_2

ಸಭೆಯಲ್ಲಿ ಶಾಸಕ ಜೆ.ಆರ್.ಲೋಬೋ ಉಪಮೇಯರ್ ಸುಮಿತ್ರ, ಪಾಲಿಕೆ ಆಯುಕ್ತ ಎಚ್. ಗೋಪಾಲಕೃಷ್ಣ ಮತ್ತಿತರ ಅಧಿಕಾರಿಗಳು, ಮನಪಾ ಸದಸ್ಯರು ಉಪಸ್ಥಿತರಿದ್ದರು.

ಸ್ಮಾರ್ಟ್ ಸಿಟಿ ಯೋಜನೆಗೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ಕಾರ್ಯಾಗಾರ :
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ಪ್ರಥಮ ಹಂತದ ಆಯ್ಕೆಯಿಂದ ವಂಚಿತವಾಗಿರುವ ನಗರಗಳ ಕುರಿತಂತೆ ಅವಲೋಕನಕ್ಕೆ ಹಾಗೂ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ಅನುಕೂಲವಾಗಲು ಕೇಂದ್ರದ ನಗರ ಅಭಿವೃದ್ಧಿ ಸಚಿವಾಲಯವು ಹೊಸದಿಲ್ಲಿಯಲ್ಲಿ ಕಾರ್ಯಾಗಾರವನ್ನು ಆಯೋಜಿಸಿದೆ ಎಂದು ವಿ.ಪೊನ್ನುರಾಜ್ ಅವರು ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ಧಿಗಾರರಿಗೆ ತಿಳಿಸಿದರು.

ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಮೇಲ್ವಿಚಾರಣೆಗಾಗಿ ಕೆಯುಐಡಿಎಫ್‌ಸಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರಕಾರವು ಪ್ರಥಮ ಪಟ್ಟಿಯಲ್ಲಿ ಕರ್ನಾಟಕದ ದಾವಣಗೆರೆ ಮತ್ತು ಬೆಳಗಾವಿಯನ್ನು ಸ್ಮಾರ್ಟ್ ಸಿಟಿಯಾಗಿ ಆಯ್ಕೆ ಮಾಡಿದೆ. ಇದೀಗ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಮತ್ತು ತುಮಕೂರು ಜಿಲ್ಲೆಗಳು ತಮ್ಮ ಪ್ರಸ್ತಾವನೆಯನ್ನು ಪರಿಷ್ಕರಿಸಬೇಕಾಗಿದೆ ಎಂದರು.

ಈಗಾಗಲೇ ಸಲ್ಲಿಸಲಾಗಿರುವ ಪ್ರಸ್ತಾವನೆಯಲ್ಲಿ ಮಂಗಳೂರು ಜ್ಞಾನ ನಗರವಾಗಿ ತನ್ನನ್ನು ಗುರುತಿಸಿಕೊಂಡಿದೆ. ಆದರೆ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ಪ್ರಸಕ್ತ ನಾಗರಿಕರಿಗೆ ಯೋಜನೆ ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಲಿದೆ ಎಂಬ ಅಂಶವನ್ನು ಪ್ರಸ್ತಾವನೆಯಲ್ಲಿ ಪ್ರಸ್ತುತಪಡಿಸಬೇಕಾಗಿದೆ ಎಂದವರು ಹೇಳಿದರು.

Write A Comment