ಕನ್ನಡ ವಾರ್ತೆಗಳು

ಕಲ್ಲಡ್ಕ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ – ಅನಿಲ ಸೋರಿಕೆ ಹಿನ್ನೆಲೆ ಭಯಭೀತರಾದ ಸ್ಥಳೀಯರು – ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

Pinterest LinkedIn Tumblr

Gas_Tanker_Palty_2

ಬಂಟ್ವಾಳ,ಎ. 19: ಅನಿಲ ತುಂಬಿದ ಟ್ಯಾಂಕರೊಂದು ಪಲ್ಟಿಯಾದ ಘಟನೆ ಸೋಮವಾರ ತಡ ರಾತ್ರಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿ (75) ಯಲ್ಲಿ ಸಂಭವಿಸಿದ್ದು, ಈ ಸಂದರ್ಭ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ಸಂಭವಿಸದಂತೆ ಮುಂಜಾಗ್ರತ ಕ್ರಮವಾಗಿ ಪರಿಸರದ 20ಕ್ಕೂ ಹೆಚ್ಚು ಮನೆಗಳ ಜನರನ್ನು ತೆರವುಗೊಳಿಸಲಾಗಿದೆ.

ಮಂಗಳೂರು ಎಂ.ಆರ್.ಪಿ.ಎಲ್. ನಿಂದ ಬೆಂಗಳೂರಿಗೆ ಅನಿಲ ಹೇರಿಕೊಂಡು ತೆರಳುತ್ತಿದ್ದ ಈ ಟ್ಯಾಂಕರ್ ಸೋಮವಾರ ತಡ ರಾತ್ರಿ ಸುಮಾರು 1 ಗಂಟೆ ವೇಳೆಗೆ ಸೂರಿಕುಮೇರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ ಎನ್ನಲಾಗಿದೆ.

Gas_Tanker_Palty_1 Gas_Tanker_Palty_3 Gas_Tanker_Palty_4 Gas_Tanker_Palty_5 Gas_Tanker_Palty_6

ಟ್ಯಾಂಕರ್ ಪಲ್ಟಿಯಾದ ಭಾರೀ ಶಬ್ದ ಕೇಳಿ ಬಂದಿದ್ದು, ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿ ಪರಿಸರವನ್ನೆಲ್ಲ ಆವರಿಸಿದೆ.ಅನಿಲ ಸೋರಿಕೆಯ ದುರ್ವಾಸನೆಯಿಂದ ಅಪಾಯದ ಮುನ್ಸೂಚನೆ ಅರಿತ ಸಮೀಪದ ಕೆಲವು ಮನೆಗಳ ನಿವಾಸಿಗಳು ತಕ್ಷಣ ಸುರಕ್ಷಿತ ಸ್ಥಳಕ್ಕೆ ಓಡಿದ್ದಾರೆ ಎನ್ನಲಾಗಿದೆ.

ಅವಘಡ ಸಂಭವಿಸಿದ ಮಾಹಿತಿ ಲಭಿಸುತ್ತಲ್ಲೇ ಘಟನಾ ಸ್ಥಳಕ್ಕೆ ಧಾವಿಸಿದ ವಿಟ್ಲ, ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸರು ಸ್ಥಳೀಯ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಿದ್ದಾರೆ. ಅವಘಡದಿಂದ ಯಾರಿಗೂ ಯಾವುದೇ ಗಾಯವಾದ, ಜೀವಕ್ಕೆ ಅಪಾಯವಾದ ಬಗ್ಗೆ ವರದಿಯಾಗಿಲ್ಲ.

ಬೆಳಿಗೆಯವರೆಗೂ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗುತ್ತಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮುಂಜಾಗ್ರತ ಕ್ರಮವಾಗಿ ಪೊಲೀಸರು ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ರಾತ್ರಿಯಿಂದಲೇ ಸ್ಥಗಿತಗೊಳಿಸಿದ್ದಾರೆ.

Write A Comment