ಕನ್ನಡ ವಾರ್ತೆಗಳು

ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದ.ಕ ಜಿಲ್ಲೆಯಲ್ಲಿ 277 ಪ್ರಕರಣ ದಾಖಲು

Pinterest LinkedIn Tumblr

ಮ೦ಗಳೂರು, ಏಪ್ರಿಲ್ 19 : ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಇರುವ ಕೌಟುಂಬಿಕ ದೌರ್ಜನ್ಯ ಹಿಂಸೆ ತಡೆ ಕಾಯ್ದೆ ಅನ್ವಯ ಜಿಲ್ಲೆಯಲ್ಲಿ ಒಟ್ಟು 277  ಪ್ರಕರಣಗಳು ಸಂರಕ್ಷಣಾಧೀಕಾರಿಗಳ ಕಛೇರಿ ಹಾಗೂ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಇವುಗಳಲ್ಲಿ ಸಮಾಲೋಚನೆಯಿಂದ 92 ಪ್ರಕರಣಗಳು ಇತ್ಯರ್ಥವಾಗಿದ್ದು, ನ್ಯಾಯಾಲಯದಿಂದ 10 ಪ್ರಕರಣಗಳು ಇತ್ಯರ್ಥವಾಗಿದ್ದು, 133 ಪ್ರಕರಣಗಳು ಬಾಕಿ ಇದ್ದು ಇವುಗಳನ್ನು ಶೀಘ್ರ ಇತ್ಯರ್ಥ ಪಡಿಸಲು ಜಿಲ್ಲಾ ಕಾನೂನು ನೆರವು ಘಟಕಕ್ಕೆ ಮನವಿ ಸಲ್ಲಿಸಲು ಸಂಭಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರು ಸೂಚಿಸಿದರು.

ಅವರು ತಮ್ಮ ಕಚೇರಿಯಲ್ಲಿ ಮಹಿಳೆಯರ ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ, ಸ್ಥೈರ್ಯ ನಿಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕ ಜಿಲ್ಲಾ ಮಟ್ಟದ ಸಭೆಗಳ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದರು.

ಸ್ಥೈರ್ಯ ನಿಧಿ ಯೋಜನೆಯನ್ವಯ ಜಿಲ್ಲೆಯಲ್ಲಿ 2015ರ ಜುಲೈಯಿಂದ 2016ರ ಮಾರ್ಚ್‌ವರೆಗೆ ಒಟ್ಟು 20 ಅತ್ಯಾಚಾರ ಪ್ರಕರಣಗಳು ದಾಖಲಾಗಿರುತ್ತವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರಕ್ಷಕ ಇಲಾಖೆ, ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಮನ್ವಯತೆಯ ಕಾರ್ಯ ನಿರ್ವಹಣೆಯಿಂದ ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಒಟ್ಟು 20 ಸಂತ್ರಸ್ಥ ಮಹಿಳೆಯರಿಗೆ / ಹೆಣ್ಣು ಮಕ್ಕಳಿಗೆ ಸ್ಥೈರ್ಯ ನಿಧಿ ಯೊಜನೆಯಡಿ ರೂ. 25,000 ಹಾಗೂ ರೂ. 15,000 ದಂತೆ ಒಟ್ಟು ರೂ. 4,60,000 ತುರ್ತು ಆರ್ಥಿಕ ಪರಿಹಾರವನ್ನು ಮಂಜೂರು ಮಾಡಿ ಸಂತ್ರಸ್ಥರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕ ಇದರಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ರಕ್ಷಣೆ, ವೈದ್ಯಕೀಯ ಚಿಕಿತ್ಸೆ/ ಆರೈಕೆ, ಕಾನೂನು ಸಲಹೆ ಮತ್ತು ನೆರವು , ಆಪ್ತ ಸಮಾಲೋಚನೆ, ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಆದೇಶಿಸಿದೆ.

ದ.ಕ ಜಿಲ್ಲೆಯಲ್ಲಿ ಮಂಗಳೂರಿನ ಸರ್ಕಾರಿ ಲೇಡಿಘೋಶನ್ ಆಸ್ಪತ್ರೆಯಲ್ಲಿ ಈ ಘಟಕ 2014 ನವೆಂಬರ್‌ನಿಂದ ಕಾರ್ಯಾಚರಿಸುತ್ತಿದೆ. 2015-16ನೇ ಸಾಲಿನಲ್ಲಿ ಒಟ್ಟು 123 ಪ್ರಕರಣಗಳು ದಾಖಲಾಗಿದ್ದು, 23 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು 21 ಅತ್ಯಾಚಾರ ಪ್ರಕರಣಗಳು 41 ಲೈಂಗಿಕ ಅಪರಾದ\ ಲೈಂಗಿಕ ಕಿರುಕುಳ, 1 ಮಹಿಳೆಯರ ಸಾಗಾಣಿಕೆ, 4 ಲೈಂಗಿಕ ದುರುಪಯೋಗಕ್ಕೆ ಒಳಗಾದ ಮಕ್ಕಳ ಸಂಖ್ಯೆ, 14 ಕಾಣೆಯಾದ/ ಅಪಹರಣ ಪ್ರಕರಣಗಳು ಇನ್ನಿತರೆ 19 ಪ್ರಕರಣಗಳು ಸೇರಿವೆ. ಇವರಲ್ಲಿ 669 ಮಂದಿಗೆ ಕಾನೂನು ನೆರವು ಒದಗಿಸಲಾಗಿದೆ.

108 ಮಹಿಳೆಯರಿಗೆ ವೈದ್ಯಕೀಯ ನೆರವು ನೀಡಲಾಗಿದೆ. 9 ಮಹಿಳೆಯರಿಗೆ ಪೋಲೀಸ್ ನೆರವು , 6 ಜನರಿಗೆ ಆಶ್ರಯ ನೀಡಲಾಗಿದೆ. 90 ಜನರಿಗೆ ಸೈಕೋ ಸೋಶಿಯಲ್ ಸಪೋರ್ಟ್/ ಸಮಾಲೋಚನೆ ಒದಗಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ರಕ್ಷಣಾ ಜಿಲ್ಲಾ ಘಟಕದ ಅಧಿಕಾರಿ ಉಸ್ಮಾನ್ ಅವರು ಸಭಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಶಶಕಾರಿ ಶ್ರೀವಿದ್ಯಾ, ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಗಣೇಶ್ ಮುಂತಾದವರು ಹಾಜರಿದ್ದರು.

Write A Comment