ಮನೋರಂಜನೆ

ವಾರ್ನರ್‌ ಅಬ್ಬರ: ಸನ್‌ರೈಸರ್ಸ್‌ಗೆ ಜಯ; ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ಗೆ ಮತ್ತೊಂದು ಸೋಲು

Pinterest LinkedIn Tumblr

warner-hooda

ಹೈದರಾಬಾದ್ : ಸೋಮವಾರ ರಾತ್ರಿ ಮಿಂಚಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರ ಅಬ್ಬರದ ಆಟದ ಮುಂದೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಮಂಡಿಯೂರಿತು.

ಉಪ್ಪಳದ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡವು 7 ವಿಕೆಟ್‌ಗಳಿಂದ ಜಯಿಸಿತು. ಮೊದಲ ಎರಡೂ ಪಂದ್ಯಗಳಲ್ಲಿ ಸೋತಿದ್ದ ಸನ್‌ರೈಸರ್ಸ್ ಮೂರನೇ ಪಂದ್ಯದಲ್ಲಿ ಗೆದ್ದಿತು. ಮುಂಬೈ ತಂಡವು ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದೆ. ಮೂರರಲ್ಲಿ ಸೋತು, ಒಂದರಲ್ಲಿ ಮಾತ್ರ ಗೆದ್ದಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್ ತಂಡವು ರೋಹಿತ್ ಶರ್ಮಾ  ಬಳಗವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 142 ರನ್ ಗಳಿಸಿತು. ಸುಲಭದ ಗುರಿಯ ಬೆನ್ನತ್ತಿದ ಸನ್‌ರೈಸರ್ಸ್ ತಂಡವು ಡೇವಿಡ್ ವಾರ್ನರ್ (ಔಟಾಗದೆ 90; 59ಎ, 7ಬೌಂ, 4 ಸಿ) ಅವರ ಅಬ್ಬರದ ಆಟದ ನೆರವಿನಿಂದ ಜಯಿಸಿತು. ಇನಿಂಗ್ಸ್‌ನಲ್ಲಿ ಇನ್ನೂ 15 ಎಸೆತಗಳು ಬಾಕಿಯಿದ್ದವು.

ಗುರಿಯ ಬೆನ್ನತ್ತಿದ್ದ ಸನ್‌ರೈಸರ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ ದರು. ಮೊದಲ ಓವರ್‌ನಲ್ಲಿ ಟಿಮ್ ಸೌಥಿ ಎಸೆತಕ್ಕೆ ಔಟಾದರು. ಕ್ರೀಸ್‌ಗೆ ಬಂದ ಮೊಯಿಸೆಸ್ ಹೆನ್ರಿಕ್ಸ್‌ (20 ರನ್) ಶಾಂತಚಿತ್ತರಾಗಿ ಆಡಿದರು. ಇನ್ನೊಂದೆಡೆ ಡೇವಿಡ್ ವಾರ್ನರ್ ಅವರ ಅಬ್ಬರದ ಆಟ ಕಳೆಗಟ್ಟಿತು. ಯಾವುದೇ ಹಂತದಲ್ಲಿಯೂ ತಮ್ಮ ತಂಡಕ್ಕೆ ಹಿನ್ನಡೆಯಾಗದಂತೆ ನೋಡಿ ಕೊಂಡರು. ಸೌಥಿ, ಮೆಕ್‌ಲಾಗನ್‌, ಬೂಮ್ರಾ, ಹರಭಜನ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಎಸೆತಗಳನ್ನು ಬೌಂಡರಿಯಾಚೆಗೆ ಕಳಿಸಿದರು. ಇದರಿಂದ ತಂಡದ ಗೆಲುವು ಸುಲಭವಾಯಿತು.

ಬರೀಂದರ್ ಮಿಂಚು
ಮುಂಬೈ ತಂಡವು ಸಾಧಾರಣ ಮೊತ್ತ ಗಳಿಸಲು ಸನ್‌ರೈಸರ್ಸ್ ತಂಡದ ಯುವ ಬೌಲರ್ ಬರೀಂದರ್ ಸರಾನ್ (28ಕ್ಕೆ3) ಕಾರಣರಾದರು.
ಮೊದಲ ಓವರ್‌ನಲ್ಲಿಯೇ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಮಾರ್ಟಿನ್ ಗುಪ್ಟಿಲ್ ವಿಕೆಟ್‌ಕೀಪರ್ ನಮನ್ ಓಜಾಗೆ ಕ್ಯಾಚಿತ್ತರು. ಕೇವಲ ಎರಡು ರನ್ ಗಳಿಸಿದ್ದ ಮಾರ್ಟಿನ್ ಮರಳಿದರು. ನಾಲ್ಕನೇ ಓವರ್‌ನಲ್ಲಿ ಮಿಂಚಿದ ಬರೀಂದರ್ ಅವರು ಪಾರ್ಥಿವ್ ಪಟೇಲ್ ವಿಕೆಟ್ ಕಬಳಿಸಿದರು. ಇದರಿಂದಾಗಿ ತಂಡವು ಕೇವಲ 23 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು.

ಕ್ರೀಸ್‌ಗೆ ಬಂದ ಅಂಬಟಿ ರಾಯುಡು ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು. ಆದರೆ, ನಾಯಕ ರೋಹಿತ್ ಶರ್ಮಾ (5 ರನ್) ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ (11 ರನ್) ರಾಯುಡುಗೆ ಉತ್ತಮ ಜೊತೆ ನೀಡಲಿಲ್ಲ. ಶರ್ಮಾ ರನ್‌ಔಟ್ ಆದರು. ಬಟ್ಲರ್ ಅವರು ಬರೀಂದರ್ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ವಿಕೆಟ್‌ಕೀಪರ್‌ ಓಜಾಗೆ ಕ್ಯಾಚ್ ನೀಡಿದರು. ಆಗ ತಂಡದ ಖಾತೆಯಲ್ಲಿ ಕೇವಲ 60 ರನ್‌ಗಳು ಮಾತ್ರ ಇದ್ದವು.

ಆಗ ಕ್ರೀಸ್‌ಗೆ ಬಂದ ಬರೋಡದ ಆಟಗಾರ ಕೃಣಾಲ್ ಪಾಂಡ್ಯ ಅವರು ರಾಯುಡು ಜೊತೆಗೂಡಿ ತಂಡವನ್ನು ಪಾರು ಮಾಡಿದರು. ಇವರಿಬ್ಬರೂ ಸೇರಿ ಐದನೇ ವಿಕೆಟ್ ಜೊತೆಯಾಟದಲ್ಲಿ 63 ರನ್‌ಗಳನ್ನು ಸೇರಿಸಿದರು. 18ನೇ ಓವರ್‌ ಬೌಲಿಂಗ್ ಮಾಡಲು ಚೆಂಡು ಕೈಗೆತ್ತಿಕೊಂಡ ಬರೀಂದರ್ ಈ ಜೊತೆಯಾಟವನ್ನು ಮುರಿದರು. ಅವರ ಎಸೆತವನ್ನು ಹೊಡೆದ ರಾಯುಡು ಹೆನ್ರಿಕ್ಸ್‌ಗೆ ಕ್ಯಾಚಿತ್ತು ಡಗ್‌ಔಟ್‌ ಸೇರಿದರು. ಕ್ರೀಸ್‌ಗೆ ಬಂದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಸಹೋದರನಿಗೆ ತಕ್ಕ ಜೊತೆ ನೀಡುವಲ್ಲಿ ವಿಫಲರಾದರು. ಕೇವಲ ಎರಡು ರನ್ ಗಳಿಸಿದ ಅವರು ಎಡಗೈ ವೇಗಿ ಮುಸ್ತಫಿಜರ್ ರೆಹಮಾನ್ ಎಸೆತಕ್ಕೆ ಕ್ಲೀನ್‌ಬೌಲ್ಡ್ ಆದರು. ಹರಭಜನ್ ಸಿಂಗ್ ಒಂದು ರನ್ ಗಳಿಸಿ ಔಟಾಗದೆ ಉಳಿದರು.

ಸ್ಕೋರ್‌ಕಾರ್ಡ್‌
ಮುಂಬೈ ಇಂಡಿಯನ್ಸ್‌ 6 ಕ್ಕೆ 142 (20 ಓವರ್‌ಗಳಲ್ಲಿ)

ಮಾರ್ಟಿನ್‌ ಗುಪ್ಟಿಲ್‌ ಸಿ. ನಮನ್‌ ಓಜಾ ಬಿ. ಭುವನೇಶ್ವರ್‌ ಕುಮಾರ್‌ 2
ಪಾರ್ಥಿವ್ ಪಟೇಲ್‌ ಬಿ. ಬರಿಂದರ್‌ ಸರಾನ್‌ 10
ಅಂಬಟಿ ರಾಯುಡು ಸಿ. ಮೋಸಿಸ್‌ ಹೆನ್ರಿಕ್ಸ್ ಬಿ. ಬರಿಂದರ್‌ ಸರಾನ್‌ 54
ರೋಹಿತ್‌ ಶರ್ಮಾ ರನ್‌ಔಟ್‌ (ಹೆನ್ರಿಕ್ಸ್‌/ಓಜಾ) 5
ಜಾಸ್ ಬಟ್ಲರ್‌ ಸಿ. ನಮನ್‌ ಓಜಾ ಬಿ. ಬರಿಂದರ್ ಸರಾನ್‌ 11
ಕೃಣಾಲ್‌ ಪಾಂಡ್ಯ ಔಟಾಗದೆ 49
ಹಾರ್ದಿಕ್‌ ಪಾಂಡ್ಯ ಬಿ. ಮುಸ್ತಫಿಜರ್ ರಹಮಾನ್‌ 2
ಹರಭಜನ್‌ ಸಿಂಗ್‌ ಔಟಾಗದೆ 1
ಇತರೆ: (ಲೆಗ್‌ ಬೈ 2, ವೈಡ್‌ 6) 8
ವಿಕೆಟ್‌ ಪತನ: 1–2 (ಗುಪ್ಟಿಲ್‌; 0.4), 2–23 (ಪಟೇಲ್‌; 3.6), 3–43 (ಶರ್ಮಾ; 7.1), 4–60 (ಬಟ್ಲರ್‌; 10.4), 5–123 (ರಾಯುಡು; 17.1), 6–135 (ಪಾಂಡ್ಯ; 18.5).
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4–0–17–1, ಬರಿಂದರ್‌ ಸರಾನ್‌4–0–28–3, ಮೊಸಿಸ್‌ ಹೆನ್ರಿಕ್ಸ್ 4–0–23–0, ಮುಸ್ತಫಿಜರ್‌ ರಹಮಾನ್‌ 4–0–32–1, ಬಿಪುಲ್‌ ಶರ್ಮಾ 4–0–40–0.

ಸನ್‌ರೈಸರ್ಸ್‌ ಹೈದರಾಬಾದ್ 3 ಕ್ಕೆ 145 (17.3 ಓವರ್‌ಗಳಲ್ಲಿ)

ಡೇವಿಡ್ ವಾರ್ನರ್‌ ಔಟಾಗದೆ 90
ಶಿಖರ್‌ ಧವನ್ ಬಿ. ಟಿಮ್‌ ಸೌಥಿ 02
ಮೊಯ್ಸಿಸ್‌ ಹೆನ್ರಿಕ್ಸ್‌ ಸಿ. ಪಾರ್ಥಿವ್‌ ಪಟೇಲ್‌ ಬಿ. ಟಿಮ್ ಸೌಥಿ 20
ಎಯಾನ್ ಮಾರ್ಗನ್‌ ಸಿ. ಹಾರ್ದಿಕ್‌ ಪಾಂಡ್ಯ ಬಿ. ಟಿಮ್‌ ಸೌಥಿ 11
ದೀಪಕ್‌ ಹೂಡಾ ಔಟಾಗದೆ 17
ಇತರೆ: (ಲೆಗ್‌ ಬೈ–2, ವೈಡ್‌–2, ನೋ ಬಾಲ್‌–1) 05
ವಿಕೆಟ್‌ ಪತನ: 1–4 (ಧವನ್‌; 0.5), 2–66 (ಹೆನ್ಸಿಕ್ಸ್‌; 10.1), 3–100 (ಮಾರ್ಗನ್‌; 14.2)
ಬೌಲಿಂಗ್‌: ಟಿಮ್‌ ಸೌಥಿ 4–0–24–3, ಮಿಷೆಲ್‌ ಮೆಕ್‌ಲಾಗನ್‌ 3.3–0–33–0, ಜಸ್‌ಪ್ರೀತ್ ಬೂಮ್ರಾ 3–0–19–0, ಹರಭಜನ್‌ ಸಿಂಗ್ 4–0–38–0, ಹಾರ್ದಿಕ್‌ ಪಾಂಡ್ಯ 3–0–29–0.

ಫಲಿತಾಂಶ: ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ 7 ವಿಕೆಟ್‌ ಜಯ.
ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್‌

Write A Comment