ಅಂತರಾಷ್ಟ್ರೀಯ

ಕ್ರಿಕೆಟ್ ನಲ್ಲಿ ಕ್ರಾಂತಿಕಾರಕ ಬೆಳವಣಿಗೆ; ದ್ವಿಪಕ್ಷೀಯ ಸರಣಿಯಲ್ಲಿ ಅಂಕ ಪಟ್ಟಿ ಪ್ರದರ್ಶನ

Pinterest LinkedIn Tumblr

score-boardಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕ್ರಾಂತಿಕಾರಕ ಬೆಳವಣಿಗೆಯೊಂದಕ್ಕೆ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸರಣಿ ಸಾಕ್ಷಿಯಾಗುತ್ತಿದ್ದು, ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸರಣಿ ವೇಳೆ ತಂಡಗಳ ಅಂಕಪಟ್ಟಿ ಪ್ರದರ್ಶನಕ್ಕೆ ಉಭಯ ಕ್ರಿಕೆಟ್ ಮಂಡಳಿಗಳೂ ಒಪ್ಪಿಗೆ ನೀಡಿವೆ.
ನಿನ್ನೆ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ತಂಡಗಳ ಅಂಕಪಟ್ಟಿ ಪ್ರದರ್ಶನಕ್ಕೆ ಒಪ್ಪಿಗೆ ನೀಡಿದ್ದು, ಈ ಹಿಂದೆ ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಅಂಕ ಪಟ್ಟಿ ಪ್ರದರ್ಶನಕ್ಕೆ ಮನವಿ ಮಾಡಿತ್ತು. ಇದೇ ಸರಣಿಯಲ್ಲಿ ಮಹಿಳಾ ಕ್ರಿಕೆಟ್ ತಂಡಗಳ ಅಂಕಪಟ್ಟಿ ಪ್ರದರ್ಶನಕ್ಕೂ ಉಭಯ ಕ್ರಿಕೆಟ್ ಮಂಡಳಿಗಳು ಸಮ್ಮತಿ ಸೂಚಿಸಿವೆ ಎಂದು ಹೇಳಲಾಗುತ್ತಿದೆ.
ಏನಿದು ಅಂಕಪಟ್ಟಿ ಪ್ರದರ್ಶನ?
ಕ್ರಿಕೆಟ್ ಪ್ರೇಮಿಗಳಲ್ಲಿ ಈ ಅಂಕಪಟ್ಟಿ ಪ್ರದರ್ಶನ ಕುರಿತು ಕೊಂಚ ಗೊಂದಲ ಮೂಡಬಹುದು. ಏಕೆಂದರೆ ಈಗಾಗಲೇ ತಂಡಗಳು ಆಡುವಾಗ ಅವರ ರನ್ ಮತ್ತು ವಿಕೆಟ್, ಬೌಲಿಂಗ್ ವಿವರ, ಬ್ಯಾಟಿಂಗ್ ವಿವರ ಎಂಬಿತ್ಯಾದಿ ಅಂಶಗಳ ಕುರಿತು ಫಲಕ ಇರುತ್ತಿತ್ತು. ಆದರೆ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಸರಣಿ ವೇಳೆ ಕೇವಲ ಇಷ್ಟು ಮಾತ್ರವಲ್ಲದೇ ತಂಡಗಳ ಅಂಕಪಟ್ಟಿ ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆ ತಂಡಗಳು ಗಳಿಸಿರುವ ಅಂಕಗಳು ಕೂಡ ಪ್ರದರ್ಶನಗೊಳ್ಳುತ್ತವೆ.
ಯಾವ ತಂಡ ಪಂದ್ಯ ಗೆಲ್ಲುತ್ತದೆ ಆ ತಂಡಕ್ಕೆ ಗೆಲುವಿನ ಅಂಕ ಸ್ಥಳದಲ್ಲೇ ಸೇರ್ಪಡೆಯಾಗುತ್ತದೆ. ಅಂದರೆ ತಂಡಗಳು ಪಂದ್ಯವಾಡುತ್ತಿರುವಾಗಲೇ ಸ್ಥಾನ (ರ್ಯಾಂಕಿಂಗ್) ಮತ್ತು ಅಂಕಗಳ ಮಾಹಿತಿಯನ್ನು ಪ್ರೇಕ್ಷಕರು ಪಡೆಯಬಹುದು. ಟೆಸ್ಟ್ ಪಂದ್ಯ ಗೆದ್ದರೆ 6 ಅಂಕ, ಏಕದಿನ ಪಂದ್ಯ ಗೆದ್ದರೆ 3 ಅಂಕ ಮತ್ತು ಟಿ20 ಪಂದ್ಯವಾದರೆ ಗೆದ್ದ ತಂಡಕ್ಕೆ 2 ಅಂಕ ಲಭಿಸುತ್ತದೆ.
ಇಂತಹ ಅಂಕಪಟ್ಟಿ ವ್ಯವಸ್ಥೆಯನ್ನು ಮೊದಲ ಬಾರಿಗೆ 2013ರಲ್ಲಿ ನಡೆದ ಮಹಿಳಾ ಆ್ಯಶಸ್ ಸರಣಿಯಲ್ಲಿ ಅಳವಡಿಸಲಾಗಿತ್ತು. ಅಲ್ಲಿ ಈ ವ್ಯವಸ್ಥೆಗೆ ಅಭೂತಪೂರ್ವ ಬೆಂಬಲ ಕೂಡ ಲಭಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶ್ರೀಲಂಕಾ ವಿರುದ್ಧ ಸರಣಿಗೂ ಅಂಕ ಪಟ್ಟಿ ಪ್ರದರ್ಶನಕ್ಕೆ ಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಮನವಿ ಮಾಡಿತ್ತು. ನಿನ್ನೆ ಮೋಹನ್ ಡಿಸಿಲ್ವಾ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ಮಂಡಳಿ, ತಂಡಗಳ ಅಂಕಪಟ್ಟಿ ಪ್ರದರ್ಶನಕ್ಕೆ ಸಮ್ಮತಿ ಸೂಚಿಸಿತ್ತು.

Write A Comment