ರಾಷ್ಟ್ರೀಯ

ಬಾಲಕಿ ಮೇಲೆ ಪೊಲೀಸರು ಒತ್ತಡ ಹೇರಿದ್ದರು: ಹಂದ್ವಾರ ಬಾಲಕಿ ಪರ ವಕೀಲ

Pinterest LinkedIn Tumblr

kashmir-16ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಅಪ್ರಾಪ್ತ ಬಾಲಕಿಗೆ ಯೋಧನೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆ ಸ್ವಇಚ್ಚೆಯಿಂದ ನೀಡಿದ್ದಲ್ಲ, ಹೀಗೆಯೇ ಹೇಳಬೇಕು ಎಂದು ಆಕೆಯ ಮೇಲೆ ಪೊಲೀಸರು ಒತ್ತಡ ಹಾಕಿದ್ದರು ಎಂದು ಬಾಲಕಿ ಪರ ವಕೀಲ ಹೇಳಿದ್ದಾರೆ.
ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಬಾಲಕಿ ತನ್ನ ಹೇಳಿಕೆಯಲ್ಲಿ ಯೋಧನೊಬ್ಬ ಕಿರುಕುಳ ನೀಡಿದ್ದನೆಂಬ ಆರೋಪವನ್ನು ಅಲ್ಲಗೆಳೆದಿದ್ದಳು. ಅಲ್ಲದೆ, ನನಗೆ ಯೋಧರು ಯಾವುದೇ ರೀತಿಯ ಲೈಂಗಿಕ ಕಿರುಕುಳ ನೀಡಿಲ್ಲ. ನಾನು ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದ ವೇಳೆ ಅಲ್ಲಿ ಯಾವುದೇ ಯೋಧರು ಇರಲಿಲ್ಲ. ಆದರೆ, ಶಾಲೆಯ ಸಮವಸ್ತ್ರ ಧರಿಸಿ ಆಗಮಿಸಿದ್ದ ಇಬ್ಬರು ವ್ಯಕ್ತಿಗಳು ನನ್ನ ಮೇಲೆ ದಾಳಿ ನಡೆಸಿ, ಲೈಂಗಿಕ ಕಿರುಕುಳ ನೀಡಿದ್ದರು ಎಂದು ಹೇಳಿಕೆ ನೀಡಿದ್ದಳು.
ಬಾಲಕಿ ತಂದೆ ಹಾಗೂ ಆಕೆಯ ವಕೀಲರ ಅನುಪಸ್ಥಿತಿಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಬಾಲಕಿಯ ಹೇಳಿಕೆ ದಾಖಲಿಸಲಾಗಿದ್ದು, ಇದು ಆಕೆಯ ಮೇಲೆ ಒತ್ತಡ ಹೇರಿದ್ದರು ಎಂಬುದು ಸ್ಪಷ್ಟಪಡಿಸುತ್ತದೆ ಎಂದು ಹೆಸರು ಹೇಳಲಿಚ್ಚಿಸಿದ ಬಾಲಕಿ ಪರ ವಕೀಲ ಆರೋಪಿಸಿದ್ದಾರೆ.
ಯೋಧನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪ ಪ್ರಕರಣ ಜಮ್ಮುವಿನಲ್ಲಿ ಸಾಕಷ್ಟು ಉದ್ವಿಗ್ನ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಸ್ಥಳೀಯರ ಆಕ್ರೋಶ ಇದೀಗ ತಣ್ಣಗಾಗಿದ್ದು, ಗಲಭೆ ಪೀಡಿತ ಪ್ರದೇಶವನ್ನು ಸೇನೆ ನಿಯಂತ್ರಣಕ್ಕೆ ಪಡೆದುಕೊಂಡಿದೆ.
ಇನ್ನು ಪ್ರಕರಣ ಸಂಬಂಧ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರು ಜಮ್ಮುವಿಗೆ ಭೇಟಿ ನೀಡಿದ್ದು, ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಘಟನೆ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದಾರೆಂದು ಸೇನಾ ವಕ್ತಾರ ಕರ್ನಲ್ ಎಸ್.ಡಿ. ಗೋಸ್ವಾಮಿಯವರು ಹೇಳಿದ್ದಾರೆ.

Write A Comment