ಮಂಗಳೂರು, ಎಪ್ರಿಲ್.18 : ಟಿಪ್ಪರ್ ಲಾರಿಯೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಚಲಾಯಿಸುತ್ತಿದ್ದ ಯುವತಿ ಸ್ಥ್ಯಳದಲ್ಲೆ ಸಾವನ್ನಪ್ಪಿದ ಘಟನೆ ಸೋಮವಾರ ಬಜಪೆ ಸಮೀಪದ ಕೆಂಜಾರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಭವಿಸಿದೆ.
ಅಪಘಾತಕ್ಕೆ ಬಲಿಯಾದ ಯುವತಿಯನ್ನು ಬಜಪೆ ಪೆರ್ಮುದೆ ಸಮೀಪದ ಬಟ್ರಕೆರೆ ನಿವಾಸಿ ಸಫನಾಜ್ ಖಾನ್ ಅಲಿಯಾಸ್ ಶಬಾನಾ ಬಾನು (28) ಎಂದು ಹೆಸರಿಸಲಾಗಿದೆ.
ಸಫನಾಜ್ ಎಂದಿನಂತೆ ಉದ್ಯೋಗದ ನಿಮಿತ ತನ್ನ ದ್ವಿಚಕ್ರ ವಾಹನದಲ್ಲಿ ಮಂಗಳೂರು ಕಡೆಗೆ ಸಾಗುತ್ತಿದ್ದಾಗ ಕೆಂಜಾರ್ ಕ್ರಾಸ್ ಬಳಿ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ, ಈಕೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಾಡಿ ಸಹಿತಾ ನೆಲಕ್ಕುರುಳಿದ ಸಫನಾಜ್ ಅವರು ಸ್ಥಳದಲ್ಲೇ ಸಾವನ್ನಪಿದ್ದಾರೆ ಎನ್ನಲಾಗಿದೆ.
ಸಫ್ನಾಜ್ ಅವರು ಮಂಗಳೂರಿನ ಸಿಟಿ ಸೆಂಟರ್ನಲ್ಲಿ ಸೌಂದರ್ಯ ಪರಿಕರ ಮಾರುಕಟ್ಟೆ ವಿಭಾಗದಲ್ಲಿ ಉದ್ಯೋಗ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ತಮ್ಮ ಕೆಲಸಕ್ಕಾಗಿ ಮಂಗಳೂರಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪೆರ್ಮುದೆ ಬಟ್ರಕರೆಯ ಮದರ್ ಖಾನ್ ಮತ್ತು ಆಸ್ಮತ್ ದಂಪತಿಗೆ ಐವರು ಮಕ್ಕಳು. ಅವರಲ್ಲಿ ನಾಲ್ವರು ಪುತ್ರಿಯರು, ಹಾಗೂ ಓರ್ವ ಪುತ್ರ . ಅವಿವಾಹಿತನಾಗಿರುವ ಪುತ್ರ ವಿದೇಶದಲ್ಲಿದ್ದಾರೆ. ಪುತ್ರಿಯರಲ್ಲಿ ಸಫ್ನಾಜ್ ಕೊನೆಯವರು. ಆಕೆ ಅವಿವಾಹಿತೆ. .ಈ ಹಿಂದೆ ಸಫನಾಜ್ ಬಜಪೆಯಲ್ಲಿ ಟೈಲರಿಂಗ್ ಅಂಗಡಿಯನ್ನು ಹೊಂದಿದ್ದರು.
ಅಪಘಾತ ನಡೆದ ತಕ್ಷಣ ಟಿಪ್ಪರ್ ಚಾಲಕ ವಾಹನವನ್ನು ಅಲ್ಲೆ ಬಿಟ್ಟು ಸ್ಥಳದಿಂದ ಪಾರಾರಿಯಾಗಿದ್ದಾನೆ. ಪೊಲೀಸರು ಟಿಪ್ಪರ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.