ಕನ್ನಡ ವಾರ್ತೆಗಳು

ಚರ್ಚ್‌ ಫಾದರ್‌ನಿಂದ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿತ : ಚೈಲ್ಡ್‌ಲೈನ್ ಅಧಿಕಾರಿಗಳ ಭೇಟಿ.

Pinterest LinkedIn Tumblr

pervai_chruch_boy

ವಿಟ್ಲ, ಏ.16: ಇಲ್ಲಿಗೆ ಸಮೀಪದ ಪೆರುವಾಯಿಯ ಫಾತಿಮಾ ಮಾತೆ ಚರ್ಚ್‌ನ ಫಾದರ್ ಕ್ಷುಲ್ಲಕ ಕಾರಣಕ್ಕೆ ಶಾಲಾ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕನ ಮನೆಗೆ ಚೈಲ್ಡ್‌ಲೈನ್ ಅಧಿಕಾರಿಗಳ ತಂಡ ಭೇಟಿಕೊಟ್ಟಿದ್ದು, ತನಿಖೆ ನಡೆಸುತ್ತಿದ್ದಾರೆ.

ಘಟನೆಯ ವಿವರ:
ಶಾಲೆಗೆ ರಜಾದಿನವಾದ ಕಾರಣ ಪೆರುವಾಯಿ ಚರ್ಚ್‌ನಲ್ಲಿ ವರ್ಷಂಪ್ರತಿಯಂತೆ 3-9  ವರ್ಷದೊಳಗಿನ ಮಕ್ಕಳಿಗೆ ಧರ್ಮಪ್ರಸಾದ ಸ್ವೀಕರಿಸಲು ಅವಶ್ಯವಿರುವ ವಿಶೇಷ ತರಗತಿಯನ್ನು ಪ್ರಾರಂಭಿಸಲಾಗಿತ್ತು. ಇದಕ್ಕೆ ಹಾಜರಾಗಿದ್ದ 8 ವರ್ಷ ಪ್ರಾಯದ ಮೂರನೇ ತರಗತಿಯ ಬಾಲಕನಿಗೆ ಧರ್ಮಶಿಕ್ಷಣ ತಲೆಗೆ ಹತ್ತಿರಲಿಲ್ಲ. ಕಲಿಸಿದ್ದ ಪ್ರಾರ್ಥನೆಯೂ ಬಾಯಿಪಾಠ ಬರುತ್ತಿರಲಿಲ್ಲ. ಪ್ರಾರ್ಥನೆ ಬರದಿದ್ದರೆ ಧರ್ಮಪ್ರಸಾದ ಸಿಗುವುದಿಲ್ಲ ಎಂಬ ಕಾರಣಕ್ಕೆ ಚರ್ಚ್ ಫಾದರ್ ಆಂಡ್ರ್ಯೂ ಬಾಲಕನನ್ನು ತನ್ನ ಕೊಠಡಿಗೆ ಕರೆದು ಬಾರುಕೋಲಿನಿಂದ ಬಾಲಕನ ಮೈಮೇಲೆ ಬಾಸುಂಡೆ ಬರುವಂತೆ ಬಾರಿಸಿದ್ದಾರೆ ಎನ್ನಲಾಗಿದೆ.

ಫಾದರ್ ರೌದ್ರಾವತಾರ ಕಂಡು ಬಾಲಕ ನೋವಿನಿಂದ ಅರಚಿದ್ದು, ಆದರೂ ಪಟ್ಟುಬಿಡದ ಫಾದರ್ ಮತ್ತೆ ಮತ್ತೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಾಲಕ ಅಳುತ್ತಲೇ ಮನೆಗೆ ಓಡಿಬಂದಿದ್ದು, ಮನೆಮಂದಿಯಲ್ಲಿ ವಿಷಯ ತಿಳಿಸಿದ್ದಾನೆ. ಮನೆಮಂದಿ ಚರ್ಚ್ ಧರ್ಮಗುರು ಹಲ್ಲೆ ನಡೆಸಿದ್ದರಿಂದ ಏನು ಮಾಡುವುದು ಎಂದು ತಿಳಿಯದೆ ಸುಮ್ಮನಾಗಿದ್ದಾರೆ. ಬಾಲಕನ ಕುಟುಂಬ ಸದಸ್ಯರೊಬ್ಬರು ಬಾಲಕನ ಮೈಮೇಲಿನ ಗಾಯಗಳನ್ನು ಮೊಬೈಲ್ ಮೂಲಕ ಚಿತ್ರೀಕರಿಸಿ ಎಲ್ಲೆಡೆ ರವಾನಿಸಿದ್ದಾರೆ. ಇದೀಗ ಘಟನೆ ಬಗ್ಗೆ ಸ್ಥಳೀಯರು ಚೈಲ್ಡ್‌ಲೈನ್ ಇಲಾಖೆಗೆ ದೂರು ನೀಡಿದ್ದು, ನಿನ್ನೆ ಚೈಲ್ಡ್‌ಲೈನ್ ಅಧಿಕಾರಿಗಳ ತಂಡ ಬಾಲಕನ ಮನೆಗೆ ಭೇಟಿಕೊಟ್ಟು ಮಾಹಿತಿ ಪಡೆದಿದೆ.

ಚರ್ಚ್ ಫಾದರ್ ಆಗಿದ್ದೂ ಬಾಲಕನ ಮೇಲೆ ಈ ರೀತಿ ಮೃಗೀಯ ವರ್ತನೆ ತೋರಿದ್ದು ಪೆರುವಾಯಿ ಚರ್ಚ್ ವ್ಯಾಪ್ತಿಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಧರ್ಮಪ್ರಸಾದ ಸ್ವೀಕರಿಸಲು ಪ್ರಾರ್ಥನೆ ಬರಬೇಕು ನಿಜ, ಆದರೆ ಒಂದು ವೇಳೆ ಬರದಿದ್ದರೆ ಹಲ್ಲೆ ನಡೆಸುವ ಮಟ್ಟಕ್ಕೆ ಫಾದರ್ ಇಳಿಯಬಾರದು. ಆತನಿಗೆ ಇನ್ನಷ್ಟು ಕಲಿಸಿ ಮುಂದಿನ ತರಗತಿಯಲ್ಲಿ ಪಾಸ್ ಆಗುವಂತೆ ನೋಡಿಕೊಳ್ಳಬಹುದಿತ್ತು ಅನ್ನೋದು ಜನರ ಮಾತು.

ವಾಟ್ಸ್ ಆಪ್ ಮೂಲಕ ಬಹಿರಂಗ
ಬಾಲಕನಿಗೆ ಚರ್ಚ್ ಫಾದರ್ ಹಲ್ಲೆ ನಡೆಸಿದ್ದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ, ಚರ್ಚ್ ಧರ್ಮಗುರು ಎಂಬ ಕಾರಣಕ್ಕೆ ಹೆತ್ತವರು ಏನು ಮಾಡುವುದೆಂದು ತೋಚದೆ ಸುಮ್ಮನಾಗಿದ್ದರು. ಆದರೆ ಬಾಲಕನ ಕುಟುಂಬದ ಸದಸ್ಯರೊಬ್ಬರು ಬಾಲಕನ ಮೈಮೇಲೆ ಎದ್ದಿರುವ ಗಾಯದ ಗುರುತುಗಳನ್ನು ಚಿತ್ರಿಸಿ ವಾಟ್ಸ್ ಆಪ್ ಮೂಲಕ ಎಲ್ಲರಿಗೂ ರವಾನಿಸಿದ್ದರು. ಅದು ಎಲ್ಲೆಡೆ ವೈರಲ್ ಆಗಿದ್ದು, ಫಾದರ್ ತಪ್ಪನ್ನು ಸಮಾಜ ಗುರುತಿಸುವಂತೆ ಮಾಡಿದೆ.

ಕೃಪೆ : ಸಂಜೆವಾಣಿ

Write A Comment