ಕನ್ನಡ ವಾರ್ತೆಗಳು

ಬಾಳಿಗಾ ಕೊಲೆ ಪ್ರಕರಣದ ಹಿಂದೆ ಪ್ರಭಾವಶಾಲಿ ವ್ಯಕ್ತಿಗಳ ಕೈವಾಡ, ಕಾಂಗ್ರೆಸ್,ಬಿಜೆಪಿ ಮೌನಕ್ಕೆ ಶರಣು : ಪ್ರೋ.ನರೇಂದ್ರ ನಾಯಕ್ ಆರೋಪ

Pinterest LinkedIn Tumblr

Baliga_murder_protest_1

ಮಂಗಳೂರು, ಎ. 15: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಕೊಲೆ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಹಾಗೂ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಜಸ್ಟಿಸ್ ಫಾರ್ ಬಾಳಿಗಾ, ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸದಸ್ಯರು ಜಂಟಿಯಾಗಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಮೂಹಿಕ ಧರಣಿ ನಡೆಸಿದರು.

ಪ್ರತಿಭಟನಕಾರರನ್ನುದ್ದೇಶಿಸಿ ಅಖಿಲ ಭಾರತ ವಿಚಾರವೇದಿಕೆಯ ಅಧ್ಯಕ್ಷ ಪ್ರೋ.ನರೇಂದ್ರ ನಾಯಕ್ ಅವರು ಮಾತನಾಡಿ, ಬಾಳಿಗಾ ಕೊಲೆ ಪ್ರಕರಣದಲ್ಲಿ ಮಂಗಳೂರಿನ ಹಲವು ಶ್ರೀಮಂತರು, ಪ್ರಭಾವಶಾಲಿಗಳು ಭಾಗಿಯಾಗಿದ್ದಾರೆ.ವಿನಾಯಕ ಬಾಳಿಗಾ ಹತ್ಯೆಯ ವಿರುದ್ಧ ಸಚಿವ ಯು.ಟಿ.ಖಾದರ್ ಹೊರತುಪಡಿಸಿ ಇತರ ಕಾಂಗ್ರೆಸ್ ಮುಖಂಡರು ವೌನವಾಗಿದ್ದಾರೆ. ವಿನಾಯಕ ಬಾಳಿಗ ಬಿಜೆಪಿ ಕಾರ್ಯಕರ್ತನಾಗಿದ್ದರೂ ಬಿಜೆಪಿ ಮುಖಂಡರೂ ಕೂಡ ಮೌನವಾಗಿದ್ದಾರೆ. ಅನ್ಯಾಯ ಕಂಡೂ ಕೂಡ ಕೆಲವೇ ಜನ ಹೊರತುಪಡಿಸಿ ಮಂಗಳೂರಿನ ಜನ ಮೌನವಾಗಿದ್ದಾರೆ. ಈ ಹತ್ಯೆಯ ಹಿಂದೆ ದೊಡ್ಡ ಮಾಫಿಯ ಜಾಲವೇ ಇದೆ ಎಂದು ಆರೋಪಿಸಿದರು.

 

Baliga_murder_protest_2 Baliga_murder_protest_3 Baliga_murder_protest_4 Baliga_murder_protest_5 Baliga_murder_protest_6 Baliga_murder_protest_7 Baliga_murder_protest_8 Baliga_murder_protest_9

ಯುವಬಿಗ್ರೇಡ್ ಸಂಸ್ಥಾಪಕ ನರೇಶ್ ಶೆಣೈ ಪ್ರಕರಣದ ಸೂತ್ರಧಾರ ಎಂದು ಪೊಲೀಸ್ ಇಲಾಖೆಯೇ ಗುರುತಿಸಿದೆ. ನಗರದ ಪೊಲೀಸ್ ಕಮಿಷನರ್ ಚಂದ್ರಶೇಖರ್ ತನಿಖೆಯ ನೇತೃತ್ವವನ್ನು ವಹಿಸಿಕೊಂಡು ತೆರೆಮೆರೆಯ ಪ್ರತಿಷ್ಟರನ್ನು ಬಂಧಿಸಲು ಮುಂದಾದ ಸಂದರ್ಭದಲ್ಲಿ ಕಾಣದ ಕೈಗಳು ಒಂದಾಗಿ ತನಿಖೆಯನ್ನು ದಿಕ್ಕು ತಪ್ಪಿಸುವ, ಸೂತ್ರಧಾರರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿವೆ ಎಂದು ನಾಯಕ್ ದೂರಿದರು.

ಸರಕಾರಕ್ಕೆ ಕೋಟ್ಯಂತರ ರೂ. ವಂಚಿಸುತ್ತಿದ್ದ ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳ ಪ್ರಮುಖರ, ಬ್ಯಾಂಕರ್‌ಗಳ ವಂಚನೆಗಳನ್ನು ಬಯಲಿಗೆಳೆಯುತ್ತಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗರ ಕೊಲೆ ನಡೆದು ವಾರಗಳು ಕಳೆದರೂ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ನರೇಂದ್ರ ನಾಯಕ್ ಬೇಸರ ವ್ಯಕ್ತಪಡಿಸಿದರು.

ವಿನಾಯಕ ಬಾಳಿಗರ ಕೊಲೆಯ ಹಿಂದಿರುವ ಎಲ್ಲಾ ಆರೋಪಿಗಳನ್ನು ಕೂಡಲೆ ಬಂಧಿಸಬೇಕು, ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಪ್ರತ್ಯೇಕ ತಂಡ ರಚಿಸಬೇಕು,ಬಾಳಿಗಾ ಕುಟುಂಬಕ್ಕೆ ಆರ್ಥಿಕ ಪರಿಹಾರ ಒದಗಿಸ ಬೇಕು ಎಂದು ಪ್ರತಿಭಟನ ನಿರತರು ಆಗ್ರಹಿಸಿದರು.

ಪ್ರತಿಭಟನಕಾರರನ್ನುದ್ದೇಶಿಸಿ ವಿವಿಧ ಸಂಘಟನೆಗಳ ಮುಖಂಡರಾದ ದಯಾನಂದ ಶೆಟ್ಟಿ, ವಿ.ಸೀತಾರಾಮ್ ಬೇರಿಂಜ, ಎಂ.ಕರುಣಾಕರ್ ಕುಲಾಲ್, ಎಂ.ದೇವದಾಸ್, ಸಂತೋಷ್ ಬಜಾಲ್, ರೆನ್ನಿಡಿಸೋಜ, ಪಿ.ವಿ.ಮೋಹನ್, ಗಣೇಶ್ ಬಾಳಿಗ, ಇಮ್ತಿಯಾಝ್ ಬಿ.ಕೆ, ನಿತಿನ್ ಕುತ್ತಾರ್, ಚರಣ್ , ದಿನೇಶ್ ಹೆಗ್ಡೆ ಉಳಿಪಾಡಿ ಮುಂತಾದವರು ಮಾತನಾಡಿದರು.

ವಿನಾಯಕ ಬಾಳಿಗರ ಕುಟುಂಬಸ್ಥರು, ಸಮಾನ ಮನಸ್ಕ ವಿದ್ಯಾರ್ಥಿ ಯುವಜನ, ಮಾನವ ಹಕ್ಕು, ಮಹಿಳಾ ಸಂಘಟನೆಗಳು,ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಗಳ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Write A Comment