ನವದೆಹಲಿ: ದೇಶದ್ರೋಹದ ಆರೋಪ ಎದುರಿಸುತ್ತಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು )ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್ ಜೀವಕ್ಕೆ ಅಪಾಯವಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಆ ಇಬ್ಬರ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಬಸ್ಸಿನಲ್ಲಿ ಪತ್ತೆಯಾದ ಬ್ಯಾಗ್ ನಲ್ಲಿ ಜೆಎನ್ ಯು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಪತ್ರ ಹಾಗೂ ಪಿಸ್ತೂಲ್ ದೊರೆತ ನಂತರ ದೆಹಲಿ ಪೊಲೀಸರು ಕನ್ಹಯ್ಯ ಕುಮಾರ್ ಹಾಗೂ ಉಮರ್ ಖಾಲಿದ್ ಅವರ ಭದ್ರತೆಯನ್ನು ಪರಿಶೀಲಿಸಲು ನಿರ್ಧರಿಸಿದ್ದಾರೆ.
ಬಸ್ ನಲ್ಲಿ ಪತ್ತೆಯಾದ ಬ್ಯಾಗ್ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ರವಾನಿಸಿದ್ದಾರೆ. ನಿನ್ನೆಯಷ್ಟೇ ನಾಗ್ಪುರಕ್ಕೆ ಭೇಟಿ ನೀಡಿದ್ದ ಕನ್ಹಯ್ಯ ಕುಮಾರ್ ಅವರು ಹಲವು ಪ್ರತಿಭಟನೆಗಳನ್ನು ಎದುರಿಸಿದ್ದರು, ಅಲ್ಲದೆ ಅವರ ಮೇಲೆ ಚಪ್ಪಲಿ ಹಾಗೂ ಶೂ ಎಸೆದ ಘಟನೆಯೂ ನಡೆದಿತ್ತು.