ಅಂತರಾಷ್ಟ್ರೀಯ

ಉಗ್ರರ ರಕ್ಷಣೆಗೆ ರಹಸ್ಯ ವೆಟೋ; ಚೀನಾ ವಿರುದ್ಧ ತಿರುಗಿ ಬಿದ್ದ ಭಾರತ

Pinterest LinkedIn Tumblr

masood-azhar11

ವಿಶ್ವಸಂಸ್ಥೆ: ಪಠಾಣ್ ಕೋಟ್ ಉಗ್ರ ದಾಳಿಯ ಪ್ರಮುಖ ರೂವಾರಿ ಮ್ತತು ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಮೇಲೆ ನಿಷೇಧ ಹೇರುವ ಯತ್ನವನ್ನು ತಡೆಯಲೆತ್ನಿಸುತ್ತಿರುವ ಚೀನಾ ವಿರುದ್ಧ ಭಾರತ ತಿರುಗಿಬಿದ್ದಿದ್ದು, ಚೀನಾದ ರಹಸ್ಯ ವೆಟೋ ಅಧಿಕಾರ ಪ್ರಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಪಾಕಿಸ್ತಾನದ ಉಗ್ರ ನಾಯಕರ ರಕ್ಷಣೆಗಾಗಿ ಚೀನಾ ತೋರಿಸುತ್ತಿರುವ ಉತ್ಸಾಹದ ಕುರಿತು ವಿಶ್ವಸಂಸ್ಥೆ ಹೊಣೆಗಾರಿಕೆಯನ್ನು ತೋರಿಸಬೇಕು ಎಂದು ಭಾರತದ ಸದಸ್ಯರು ಆಗ್ರಹಿಸಿದ್ದಾರೆ. ಅಂತೆಯೇ ಭಾರತದ “ಭಯೋತ್ಪಾದಕರ ವಿರುದ್ಧ ದಿಗ್ಬಂಧನ ವಿಧಿಸಬೇಕೆಂಬ ಬೇಡಿಕೆಯನ್ನು ಚೀನಾ ಒಪ್ಪದೇ ಇರಲು ಕಾರಣ ಏನು ಎಂಬುದನ್ನು ಸಾಮಾನ್ಯ ಸದಸ್ಯರಿಗೆ ವಿಶ್ವಸಂಸ್ಥೆಯು ವಿವರಿಸಿಲ್ಲ” ಎಂದು ಭಾರತ ಟೀಕಿಸಿದೆ.

ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಏರ್ಪಡಿಸಿದ್ದ “ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದಕ ಕೃತ್ಯಗಳಿಂದ ಉಂಟಾಗಿರುವ ಬೆದರಿಕೆಗಳು’ ಕುರಿತ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾಪಿಸಿದ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು, ವಿಶ್ವಸಂಸ್ಥೆಯ ಅಲ್​ಖೈದಾ, ತಾಲಿಬಾನ್ ಮತ್ತು ಇಸಿಸ್ ದಿಗ್ಬಂಧನ ಸಮಿತಿಯ ನಿಯಮಾವಳಿಗಳನ್ನು ಮರುಪರಿಶೀಲಿಸುವ ಅಗತ್ಯ ಇದ್ದು, ಇವುಗಳು ಯಾವುದೇ ಹೊಣೆಗಾರಿಕೆಯನ್ನು ಹೊಂದಿಲ್ಲ ಎಂದು ಹೇಳಿದರು.

“ಸಮಿತಿಯ 15 ಸದಸ್ಯರಲ್ಲಿ ಪ್ರತಿಯೊಬ್ಬರಿಗೂ ಈಗ “ವೆಟ” ಅಧಿಕಾರವಿದ್ದು, ವಿಶ್ವಸಂಸ್ಥೆ ದಿಗ್ಬಂಧನ ಸಮಿತಿಯ ಈ 15 ಜನರನ್ನು ಹೊರತು ಪಡಿಸಿ ಬೇರೆ ಯಾವುದೇ ಸದಸ್ಯರಿಗೂ ಈ ನಿರ್ದಿಷ್ಟ ಪ್ರಕರಣದ ವೆಟೊ ಬಗ್ಗೆ ವಿಶ್ವಸಂಸ್ಥೆ ಸಾಮಾನ್ಯ ಸದಸ್ಯರಿಗೆ ತಿಳಿಸಿಲ್ಲ. ಇದನ್ನು ಸಾಮಾನ್ಯ ಸದಸ್ಯರಿಗೆ ತಿಳಿಸಬೇಕೆಂಬ ಹೊಣೆಗಾರಿಕೆಯನ್ನೂ ವಿಶ್ವಸಂಸ್ಥೆ ಪ್ರದರ್ಶಿಸಿಲ್ಲ ಎಂದು ಸೈಯದ್ ಅಕ್ಬರುದ್ದೀನ್ ಅವರು ಪರೋಕ್ಷವಾಗಿ ಚೀನಾ ವಿರುದ್ಧ ಹರಿಹಾಯ್ದರು.

ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿಯ ಪ್ರಮುಖ ರೂವಾರಿಯಾಗಿರುವ ಅಜರ್ ಮಸೂದ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ಉಗ್ರ ಮುಖಂಡರ ವಿರುದ್ಧ ದಿಗ್ಬಂಧನ ವಿಧಿಸಬೇಕೆಂಬ ಭಾರತದ ಯತ್ನಕ್ಕೆ ಕಳೆದ ತಿಂಗಳು ಚೀನಾ ತನ್ನ ರಹಸ್ಯ ವೆಟೋ ಅಧಿಕಾರವನ್ನು ಬಳಕೆ ಮಾಡಿ ತಡೆ ಹಿಡಿದಿತ್ತು.

Write A Comment