ಕನ್ನಡ ವಾರ್ತೆಗಳು

ದಿ. ಮುಕುಂದ ಜೋಶಿ ಅವರ ಕವನ ಸಂಕಲನ ಕೃತಿ ಬಿಡುಗಡೆ

Pinterest LinkedIn Tumblr

Mumbai_class_photo

ಅನ್ಯರ ಅನಿಸಿಕೆಯನ್ನೂ ಮೆಚ್ಚುವಂತಹ ಗುಣ ಮುಕುಂದ ಜೋಶಿ ಅವರಲ್ಲಿತ್ತು : ಡಾ. ವ್ಯಾಸರಾವ್ ನಿಂಜೂರ್

ಮುಂಬಯಿ: ಮುಕುಂದ ಜೋಶಿ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಅವರೋರ್ವ ಉತ್ತಮ ಅನುವಾದ ಲೇಖಕರು ಹಾಗೂ ನವ್ಯ ಸಾಹಿತಿ ಅಗಿದ್ದರು. ನವ್ಯ ಸಾಹಿತ್ಯದ ಬಗ್ಗೆ ಒಮ್ಮೆ ನಾನು ಕಟುವಾಗಿ ಮಾತಾಡಿದಕ್ಕೆ ಜೋಶಿ ಅವರು ನನಗೆ ನಿಮ್ಮ ಪ್ರ್ರಾಮಾಣಿಕತೆಯನ್ನು ನಾನು ಮೆಚ್ಚಿದ್ದೇನೆ ಎಂದು ಹೇಳಿದವರು. ಬೇರೆಯವರ ಅನಿಸಿಕೆಯನ್ನೂ ಗೌರವಿಸುವ ಗುಣ ಅವರಲ್ಲಿತ್ತು. ಇಂದು ಬಿಡುಗಡೆಗೊಂಡಿರುವ ಹಿಂದಿ ಮೂಲದ ಕನ್ನಡ ಅನುವಾದ ಕವನ ಸಂಕಲನ ಕೃತಿ ಬಿಡುಗಡೆ ಗೊಂಡಂತೆ ಮುಕುಂದ ಜೋಶಿಯವರ ಇನ್ನೂ ಹಸ್ತ ಪ್ರತಿಯಲ್ಲಿರುವ ಲೇಖನಗಳು, ಕವಿತೆಗಳು ಪ್ರಕಟಗೊಳ್ಳಲಿ ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಖ್ಯಾತ ಸಾಹಿತಿ ಡಾ. ವ್ಯಾಸರಾವ್ ನಿಂಜೂರರವರು ಹೇಳಿದರು.

ಅವರು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಆಶ್ರಯದಲ್ಲಿ ಶನಿವಾರ ದಿನಾಂಕ ೦೯.೦೪ ೨೦೧೬ರಂದು ಸಂಘದ ಸಮರಸಭವನದಲ್ಲಿ ದಿ. ಮುಕುಂದ ಜೋಶಿಯವರ ಹಿಂದಿ ಮೂಲದ ಕನ್ನಡ ಅನುವಾದ ಕವನ ಸಂಕಲನ ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಾಕಿಲ್ಲ ಮತ್ತು ಇತರ ಕವಿತೆಗಳು ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.

ಕೃತಿ ಬಿಡುಗಡೆ ಗೊಳಿಸಿದ ಸಂಘದ ಉಪಾಧ್ಯಕ್ಷರಾದ ಬಿ. ಜಿ. ನಾಯಕರು ಮಾತನಾಡುತ್ತಾ ಕರ್ನಾಟಕ ಸಂಘದಲ್ಲಿ ಬಹುಭಾಷಾ ವಿದ್ವಾಂಸರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ರಾಷ್ಟ್ರೀಯ ಮಟ್ಟದ ಕವಿಗಳೂ, ಸಾಹಿತಿಗಳು, ಕಲಾವಿದರು ಇಲ್ಲಿ ಭಾಗವಹಿಸಿದ್ದಾರೆ. ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಸಾಹಿತಿಗಳನ್ನು ಸಂಘವು ಅಹ್ವಾನಿಸುತಿತ್ತು. ೮೩ ವರ್ಷಗಳಿಂದ ಸಂಘವು ಕನ್ನಡ ಭಾಷಾ , ಸಂಸ್ಕೃತಿಗೋಸ್ಕರ ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯ . ಇಂದು ಸಂಘದಲ್ಲಿ ಉತ್ತಮ ಸಾಹಿತಿಯಾಗಿದ್ದ ಮುಕುಂದ ಜೋಶಿಯವರ ಹಿಂದಿ ಮೂಲದ ಕನ್ನಡ ಅನುವಾದ ಕವನ ಸಂಕಲನ ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಕಿಲ್ಲ ಮತ್ತು ಇತರ ಕವಿತೆಗಳು ಕೃತಿ ಬಿಡುಗಡೆ ಗೊಳ್ಳುತ್ತಿರುವುದು ಸಂತೋಷದ ವಿಷಯ ಎನ್ನುತ್ತಾ ಮುಕುಂದ ಜೋಶಿಯವರ ಪತ್ನಿ ಕೋಕಿಳಾ ಜೋಶಿ ಹಾಗೂ ಸಹೋದರ ಜಯಂತ ಜೋಶಿ ಅವರನ್ನು ಅಭಿನಂದಿಸಿದರು.

ಪತ್ರಕರ್ತ, ಸಾಹಿತಿ ಶ್ರೀನಿವಾಸ ಜೋಕಟ್ಟೆ ಕೃತಿಯ ಬಗ್ಗೆ ಮಾತನಾಡುತ್ತಾ ೮೦ರ ದಶಕದಿಂದ ಮುಕುಂದ ಜೋಶಿಯವರ ಒಡನಾಡಿನಲ್ಲಿ ನಾನು ಇದ್ದೆ. ರೂಯ್ಯ ಕಾಲೇಜ್ ನ ಹಿಂದಿ ವಿಭಾಗದ ಮುಖ್ಯಸ್ಥರಾಗಿ ಸೇವಾ ನಿವೃತ್ತರಾಗಿದ್ದ ಮುಂಬಯಿಯ ಶ್ರೀ ಮುಕುಂದ ಜೋಶಿಯವರು ನಮ್ಮ ಜೊತೆಗಿಲ್ಲವಾದರೂ ಅವರ ಕೃತಿಗಳು ನಮ್ಮೆದುರುಗಿದೆ. ಅವರು ಬರೆಯುತ್ತಿದ್ದುದು ಆಗಿನ ನವ್ಯ ಮಾದರಿಯ ಕತೆಗಳನ್ನು . ಅವರ ಕತೆಗಳು ಸುಲಭದಲ್ಲಿ ಅರ್ಥ ಬಿಟ್ಟು ಕೊಡುವುದಿಲ್ಲ. ಇದೀಗ ಈ ರಾತ್ರಿಗಳ ಜೊತೆ ನಮಗೆ ಪ್ರೀತಿ ಯಾಕಿಲ್ಲ ಮತ್ತು ಇತರ ಕವಿತೆಗಳು ಹಿಂದಿ ಭಾಷೆಯಲ್ಲಿನ ಪ್ರಮುಖ ಕವಿ, ವಿಮರ್ಶಕ ಡಾ. ವಿಜಯಕುಮಾರ ಅವರ ಹಿಂದಿ ಮೂಲದ ಕವಿತೆಗಳ ಕನ್ನಡ ಅನುವಾದ ಅಥವಾ ರೂಪಾಂತರ. ಇನ್ನೊಂದು ಭಾಷೆಯ ಕತೆ – ಲೇಖನ ಕಾದಂಬರಿಯ ಅನುವಾದಕ್ಕೂ, ಕವಿತೆಗಳ ಅನುವಾದಕ್ಕೂ ತುಂಬಾ ಅಂತರವಿರುತ್ತದೆ. ಕವಿತೆಯನ್ನು ಮತ್ತೊಂದು ಭಾಷೆಯಲ್ಲಿ ಹಿಡಿದಿಡುವುದು ಸ್ವಲ್ಪ ಕಷ್ಟವೇ. ಕವಿಯ ಮೂಲ ಆಶಯ ಅನುವಾದದಲ್ಲಿ ಬಂದಿರ ಬಹುದು ಅಥವಾ ಬಾರದೆಯೂ ಇರುವ ಸಾಧ್ಯತೆಗಳಿರುತ್ತದೆ.

ಮುಕುಂದ ಜೋಷಿಯವರು ವಿಜಯಕುಮಾರರ ಕವಿತೆಗಳನ್ನು ಕನ್ನಡಕ್ಕೆ ತರುವಲ್ಲಿ ಅತ್ಯಂತ ಸಮರ್ಥರು. ಕವನ ಸಂಕಲನದ ೩೦ ಕವಿತೆಗಳು ೧೨೮ ಪುಟಗಳನ್ನು ಹೊಂದಿದೆ ಎನ್ನುವುದೇ ವಿಶೇಷ. ಇಲ್ಲಿನ ಅನೇಕ ಕವಿತೆಗಳಲ್ಲಿ ರಾತ್ರಿಯ ದೃಶ್ಯಗಳೇ ಹೆಚ್ಚು. ನಗರದ ಈ ರಾತ್ರಿಯಲ್ಲಿ ಮನುಷ್ಯ ಹುಡುಕಾಟವಿದೆ. ನಗರ ಪ್ರಜ್ಞೆಯ ಕವಿ ವಿಜಯ ಕುಮಾರರು ನಗರದ ಹಗಲಿನಲ್ಲಿ ರಾತ್ರೆಗಳನ್ನು ಪುನರ್ ನಿರ್ಮಿಸುತ್ತಿರುವಂತೆ ಕಾಣುತ್ತದೆ ಎಂಬ ಮಾತು ಒಪ್ಪ ತಕ್ಕದೇ ಆಗಿದೆ ಎಂದು ಶ್ರೀನಿವಾಸ ಜೋಕಟ್ಟೆಯವರು ಹೇಳಿದರು.

ಖ್ಯಾತ ಹಿಂದಿ ಕವಿ ಡಾ. ವಿಜಯಕುಮಾರ್ ಅವರು ಉಪಸ್ಥಿತರಿದ್ದು ಜೋಶಿಯವರ ಬಗ್ಗೆ ಮಾತನಾಡುತ್ತಾ ಜೋಶಿ ಅವರಿಗೆ ಸಾಹಿತ್ಯ , ಕಲಾ, ಸಂಗೀತದಲ್ಲಿ ತುಂಬಾ ಆಸಕ್ತಿ. ನಾವು ಅವುಗಳ ಬಗ್ಗೆ ಸದಾ ಚರ್ಚೆ ನಡೆಸುತ್ತಿದ್ದೆವು. ನನ್ನ ಕವಿತೆ ಕನ್ನಡದಲ್ಲಿ ಅನುವಾದ ಮಾಡಿದರೂ ಅದು ಪ್ರಕಟಗೊಂಡದ್ದು ಅವರ ನಿಧನದ ನಂತರ. ಈ ಕವನ ಸಂಕಲನ ಇಂದು ಬಿಡುಗಡೆ ಗೊಂಡ ಕಾರಣದಿಂದ ನಾವೆಲ್ಲಾ ಪುನಃ ಕರ್ನಾಟಕ ಸಂಘದ ವೇದಿಕೆಯಲ್ಲಿ ಅವರನ್ನು ನೆನಪಿಸುತ್ತಿದ್ದೇವೆ. ಇದರ ಶ್ರೇಯ ಕೋಕಿಳಾ ಜೋಶಿ ಮತ್ತು ಅವರ ಸಹೋದರನಿಗೆ ಸಲ್ಲುತ್ತದೆ ಎಂದರಲ್ಲದೆ ಕರ್ನಾಟಕ ಸಂಘಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ಮುಕುಂದ ಜೋಶಿ ಅವರ ಪತ್ನಿ ಕೋಕಿಳಾ ಜೋಶಿ ವವರು ಮಾತನಾಡುತ್ತಾ ಬಹು ಭಾಷಾ ವಿದ್ವಾಂಸರಾದ ಜೋಶಿ ಅವರ ಪ್ರಗತಿಪರ ವಿಚಾರಧಾರೆಗೆ ರೂಯ್ಯ ಕಾಲೇಜು ಪ್ರೋತ್ಸಾಹನ ನೀಡಿತ್ತು. ಜೋಶಿಯವರು ಉತ್ತಮ ವಾಗ್ಮಿ . ವೇದಿಕೆಯಲ್ಲಿ ಗಂಟೆಗಟ್ಟಲೆ ಮಾತನಾಡುವ ಕಲೆ ಅವರಿಗಿತ್ತು. ಎಲ್ಲರಿಗೂ ಪ್ರಿಯರಾಗಿದ್ದರು. ಸಂಗೀತ , ಸಿನೇಮಾ, ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಎಲ್ಲ ಕ್ಷೇತ್ರದ ದಿಗ್ಗಜರ ಜೊತೆ ಆತ್ಮೀಯ ಒಡನಾಟವಿತ್ತು. ಅನುವಾದ ಮಾಡುವುದು ತುಂಬ ಕಷ್ಟ. ಮೂಲ ಲೇಖಕನ ಆಶಯವನ್ನು ಅರ್ಥ ಮಾಡಿಕೊಳ್ಳ ಬೇಕು. ಈ ಕವನ ಸಂಕಲನದ ಹಸ್ತ ಪ್ರತಿಯನ್ನು ತಿದ್ದುತ್ತಿರುವಾಗಲೆ ನಿಧನರಾದ ನನ್ನ ಪತಿಯ ಅಂತಿಮ ಆಶೆಯನ್ನು ಪೂರೈಸಲು ನಾನು ಮತ್ತು ಅವರ ಸಹೋದರ ಜಯಂತ ಜೋಶಿ ತುಂಬಾ ಪ್ರಯತ್ನ ಪಟ್ಟೆವು. ಕೊನೆಗೆ ಅಂಕ ಪ್ರಕಾಶಕರು ಈ ಕೃತಿಯನ್ನು ಪ್ರಕಟಿಸಿದರು. ಕರ್ನಾಟಕ ಸಂಘವು ಈ ಕೃತಿಯನ್ನು ಬಿಡುಗಡೆ ಗೊಳಿಸಲು ಅವಕಾಶ ಮಾಡಿಕೊಟ್ಟಿತು ಎಂದು ಹೇಳಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ದಿ. ಮುಕುಂದ ಜೋಶಿ ಅವರ ಪರಿಚಯವನ್ನು ಅವರ ಸಹೋದರ ಜಯಂತ ಜೋಶಿ ನೀಡಿದರು. ಸಾಹಿತ್ಯವಲ್ಲದೆ, ಕಲೆ, ಸಂಗೀತ ,ಸಿನೇಮಾದ ಬಗ್ಗೆ ಅವರಿಗಿರುವ ಆಸಕ್ತಿ, ರಾಷ್ಟ್ರ , ಅಂತರಾಷ್ಟ್ರೀಯ ಮಟ್ಟದ ಕಲಾವಿದರ ಬಗ್ಗೆ ಅವರಿಗಿದ್ದ ಒಡನಾಟದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಸುಶೀಲಾ ದೇವಾಡಿಗರ ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭಗೊಂಡಿತು. ವ್ಯಾಸರಾವ್ ನಿಂಜೂರ್ ಮತ್ತು ಡಾ. ವಿಜಯಕುಮಾರರ ಪರಿಚಯ ಸಂಘದ ಸಮಿತಿ ಸದಸ್ಯ ದುರ್ಗಪ್ಪ ಕೊಟಿಯವರ್ ಮಾಡಿದರು. ಬಿ. ಜಿ. ನಾಯಕ್ ಮತ್ತು ಶ್ರೀನಿವಾಸ ಜೋಕಟ್ಟೆಯವರ ಪರಿಚಯ ಸಂಘದ ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಮಾಡಿದರು. ಶ್ರೀಮತಿ ಕೋಕಿಳಾ ಜೋಶಿ ಮತ್ತು ಜಯಂತ ಜೋಶಿ ಅವರು ಶಾಲು ಹೊದಿಸಿ ನೆನಪಿನ ಕಾಣಿಕೆಯನ್ನು ನೀಡಿದರು. ಸಂಘದ ವತಿಯಿಂದ ಕೋಕಿಳಾಜೋಶಿ ಮತ್ತು ಜಂಯಂತ ಜೋಶಿ ಅವರಿಗೆ ಸಂಘದ ಉಪಾಧ್ಯಕ್ಷ ಬಿ. ಜಿ. ನಾಯಕ್ ಮತ್ತು ಓಂದಾಸ್ ಕಣ್ಣಂಗಾರ್ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿದರು. ವೇದಿಕೆಯಲ್ಲಿ ಸಂಘದ ಕೋಶಾಧಿಕಾರಿ ಎಂ. ಡಿ. ರಾವ್ , ರಂಗ ತಜ್ಞ ಡಾ. ಭರತ್ ಕುಮಾರ್ ಪೊಲಿಪು ಉಪಸ್ಥಿತರಿದ್ದರು.

ಸಮಾರಂಭದ ಕೊನೆಯಲ್ಲಿ ದಿ. ಮುಕುಂದ ಜೋಶಿಯವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಮಾಡಿದರೆ ಜಯಂತ ಜೋಶಿ ಯವರು ಧನ್ಯವಾದಾರ್ಪಣೆ ಗೈದರು.

Write A Comment