
ಮಂಗಳೂರು, ಎ. 6: ನಿರ್ಮಾಣ ಕಾಮಗಾರಿ ಸಂದರ್ಭ ಕಟ್ಟಡದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು, ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನೋರ್ವನ ಅಂಗಾಂಗವನ್ನು ದಾನ ಮಾಡಲಾಗಿದೆ.
ಕೇರಳ ಕಣ್ಣೂರಿನ ಪಯ್ಯನೂರ್ ಸಮೀಪದ ವಡಶೇರಿ ಗ್ರಾಮದ ನಿವಾಸಿ ಕೆ.ವಿ.ಬಾಬು (34) ಎಂಬವರು ಎ.2ರಂದು ಪಯ್ಯನೂರ್ನ ಚೀಮೇಣಿ ಬಳಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಎಪ್ರಿಲ್ 4ರಂದು ವೈದ್ಯರು ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು. ಬಾಬುರವರ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಆಸ್ಪತ್ರೆಯ ವೈದ್ಯರು ಕುಟುಂಬಸ್ಥರಿಗೆ ಮಾಹಿತಿ ನೀಡಿ ಅಂಗಾಂಗ ದಾನದ ಅರಿವು ಮೂಡಿಸಿದ್ದರು.ಅದರಂತೆ ಕುಟುಂಬಸ್ಥರು ಬಾಬುರವರ ಅಂಗಾಂಗ ದಾನ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.
ಬಾಬು ಅವರ ಕುಟುಂಬಿಕರು ಬಾಬು ಅವರ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಎ.ಜೆ.ಆಸ್ಪತ್ರೆಯ ವೈದ್ಯರ ತಂಡ ಬಾಬು ಅವರ ದೇಹದಿಂದ ಲಿವರ್ ಹಾಗೂ ಕಿಡ್ನಿಯನ್ನು ಯಶಸ್ವಿಯಾಗಿ ರಾತ್ರಿ ಸುಮಾರು 10:30ಕ್ಕೆ ವಿಮಾನದ ಮೂಲಕ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ರವಾನಿಸಿರುವುದಾಗಿ ಎ.ಜೆ.ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಬಾಬು ಅವರು ತಾಯಿ, ತಂದೆ, ಪತ್ನಿ, ಸಹೋದರ ಹಾಗೂ ಮೂರು ವರ್ಷದ ಪುತ್ರಿಯನ್ನು ಅಗಲಿದ್ದಾರೆ.