ರಾಷ್ಟ್ರೀಯ

ಪನಾಮಾ ಪೇಪರ್ಸ್ ವರದಿ ಸೋರಿಕೆಯಲ್ಲಿ ನೀರಾ ರಾಡಿಯಾ ಹೆಸರು ಬಹಿರಂಗ !

Pinterest LinkedIn Tumblr

Niira Radia

ನವದೆಹಲಿ: ಸುಮಾರು ಎಂಟು ವರ್ಷಗಳ ಹಿಂದೆ ಸಚಿವರು, ಪತ್ರಕರ್ತರು, ವಾಣಿಜ್ಯೋದ್ಯಮಿಗಳ ಜೊತೆಗೆ ವಿಡಿಯೋ ದೂರವಾಣಿ ಸಂಭಾಷಣೆ ನಡೆಸಿ ಸುದ್ದಿಯಾಗಿದ್ದ ವೈಷ್ಣವಿ ಕಮ್ಯೂನಿಕೇಷನ್ಸ್ ನ ಸ್ಥಾಪಕಿ ನೀರಾ ರಾಡಿಯಾರ ಹೆಸರು ಇದೀಗ ಪನಾಮಾ ಪೇಪರ್ಸ್ ಸೋರಿಕೆಯಲ್ಲಿಯೂ ಕೇಳಿಬರುತ್ತಿದೆ.

ತನಿಖಾ ದಾಖಲೆಗಳಲ್ಲಿ ನಿರಾ ಜಾಡಿಯಾ ಅಂದರೆ ಇನ್ನೊಂದು ಐ ಸ್ಪೆಲ್ಲಿಂಗ್ ಬಿಟ್ಟುಹೋಗಿದ್ದು, ಇಂಗ್ಲೆಂಡ್ ನ ವರ್ಜಿನ್ ಐಲ್ಯಾಂಡ್ ಕಂಪೆನಿಯಲ್ಲಿ ಅವರ ಹೂಡಿಕೆ ಇದು ಎಂದು ದಾಖಲೆಗಳು ಹೇಳುತ್ತವೆ. ಆದರೆ ನೀರಾ ರಾಡಿಯಾ ಅವರ ಕಚೇರಿ ಈ ಆರೋಪವನ್ನು ತಳ್ಳಿ ಹಾಕಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ಸೋರಿಕೆಗೊಂಡ ಪನಾಮಾ ಪೇಪರ್ಸ್ ನ ಮೂರನೇ ಭಾಗದಲ್ಲಿ ಸಾಗರೋತ್ತರ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಭಾರತೀಯರಲ್ಲಿ 232 ದಾಖಲೆಗಳಲ್ಲಿ ರಾಡಿಯಾ ಅವರು ಕಂಪೆನಿಯ ನಿರ್ದೇಶಕಿ ಎಂದು ಗುರುತಿಸಲಾಗಿದೆ.

ಪತ್ರಿಕೆಯಲ್ಲಿ ಪ್ರಕಟಗೊಂಡ ಭಾರತೀಯರ ಪಟ್ಟಿಯಲ್ಲಿ ಕರ್ನಾಟಕದ ಬಳ್ಳಾರಿಯ ಪ್ರಮುಖ ವಾಣಿಜ್ಯೋದ್ಯಮಿ, ಇನ್ನೊಬ್ಬ ಪ್ರಮುಖ ಕೈಗಾರಿಕೋದ್ಯಮಿ ಮತ್ತು ಚಾರ್ಟೆಡ್ ಅಕೌಂಟೆಂಟ್ ಹೆಸರು ದಾಖಲಾಗಿದೆ.

ಈ ಎಲ್ಲಾ ಆರೋಪಗಳ ನಡುವೆ ಪ್ರತಿಕ್ರಿಯೆ ನೀಡಿರುವ ಆರ್ ಬಿಐ ಗವರ್ನರ್ ರಘುರಾಮ್ ರಾಜನ್, ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಎಲ್ಲಾ ಕಂಪೆನಿಗಳು ಕಾನೂನುಬಾಹಿರವೆಂದಲ್ಲ. ಯಾವೆಲ್ಲಾ ಕಂಪೆನಿಗಳ ಅಕ್ರಮ ಎಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದರು.

ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ರಾಡಿಯಾ ಅವರ ಕಚೇರಿ, ಇಂಗ್ಲೆಂಡಿನ ವರ್ಜಿನ್ ದ್ವೀಪದಲ್ಲಿ ಅವರ ತಂದೆ ಇಕ್ಬಾಲ್ ನಾರಾಯಣ್ ಮೆನನ್ ಕಂಪೆನಿ ಸ್ಥಾಪಿಸಿದ್ದರು. ನೀರಾ ಅವರು ಅದರ ಫಲಾನುಭವಿಯಲ್ಲ. ಅಲ್ಲದೆ ನೀರಾ ರಾಡಿಯಾ ಅವರು ತಾವು ಹೊಂದಿರುವ ಸಂಪತ್ತುಗಳ ವಿವರಗಳನ್ನು ಭಾರತ ಮತ್ತು ಇಂಗ್ಲೆಂಡಿನ ಅಧಿಕಾರಿಗಳ ಮುಂದೆ ನೀಡಿದ್ದಾರೆ. ಇಂತಹ ಮಾಹಿತಿಗಳನ್ನು ಮೂರನೇ ವ್ಯಕ್ತಿ ಮುಂದೆ ಬಹಿರಂಗಪಡಿಸಬೇಕಾಗಿಲ್ಲ ಎಂದರು.

ಇನ್ನೂ ಅನೇಕ ಮಂದಿ ಭಾರತೀಯರು ಸಾಗರೋತ್ತರಗಳಲ್ಲಿ ಸಂಪತ್ತು, ಕಂಪೆನಿ ಹೊಂದಿರುವ ಬಗ್ಗೆ ಪನಾಮಾ ಪೇರರ್ಸ್ ನಲ್ಲಿ ಮಾಹಿತಿ ನೀಡಲಾಗಿದೆ. ಇತಿಹಾಸದಲ್ಲಿಯೇ ಭಾರೀ ದೊಡ್ಡದಾದ ಜಾಗತಿಕ ಮಟ್ಟದ ಸೋರಿಕೆಯನ್ನು ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ ನಡೆಸಿದೆ. ಅದಕ್ಕೆ ನೂರಕ್ಕೂ ಹೆಚ್ಚು ಜಾಗತಿಕ ಮಾಧ್ಯಮ ಸಂಘಟನೆಗಳು ಸಾಥ್ ನೀಡಿವೆ. ಈ ಪ್ರಕರಣ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

Write A Comment