ಕನ್ನಡ ವಾರ್ತೆಗಳು

ಸ್ನೇಹಿತರಿಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

Pinterest LinkedIn Tumblr

Frends_murder_photo

ಬೆಳ್ತಂಗಡಿ, ಏ.04: ಕುಡಿತದ ಅಮಲಿನಲ್ಲಿ ಸ್ನೇಹಿತರಿಬ್ಬರು ಪರಸ್ಪರ ಜಗಳವಾಡಿಕೊಂಡು ಕೊನೆಗೆ ಒಬ್ಬನ ಕೊಲೆಯಲ್ಲಿ ಪರ್ಯಾವಸಾನಗೊಂಡ ಘಟನೆ ಠಾಣಾ ವ್ಯಾಪ್ತಿಯ ಮೈಂದಬೆಟ್ಟು ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಪದ್ಮನಾಭ ಪೂಜಾರಿ(50) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಕೊಲೆಯಾದ ಪದ್ಮನಾಭ ಪೂಜಾರಿ ಹಾಗೂ ಕೊಲೆಗೈದ ಸಂಜೀವ ಪೂಜಾರಿ ಒಂದು ಕಾಲದ ಒಳ್ಳೆಯ ಸ್ನೇಹಿತರು ಪದ್ಮನಾಭ ಪೂಜಾರಿ ಅವರು ಕೊಯ್ಯೂರು ಗ್ರಾಮದ ಬಜಮನೆ ನಿವಾಸಿ ಬಾಲಕೃಷ್ಣ ಪೂಜಾರಿ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ನಿನ್ನೆ ರಾತ್ರಿ ಏಳು ಗಂಟೆಯ ಸುಮಾರಿಗೆ ಎಂದಿನಂತೆ ದಿನಬಳಕೆಯ ಸಾಮಾಗ್ರಿ ಖರೀದಿ ಮಾಡಲೆಂದು ಮನೆಯಿಂದ ಕೊಯ್ಯೂರು ಪೇಟೆಗೆ ಹೊರಟಿದ್ದರು.

ರಾತ್ರಿ 8.44ರ ಸುಮಾರಿಗೆ ಬಾಲಕೃಷ್ಣರಿಗೆ ಕರೆ ಬಂದಿದ್ದು, ಮೈಂದಕೋಡಿ ಬಸ್ ನಿಲ್ದಾಣದಲ್ಲಿ ಪದ್ಮನಾಭ ಪೂಜಾರಿ ಮತ್ತು ಸಂಜೀವ ಪೂಜಾರಿಯವರ ಮಧ್ಯೆ ಜಗಳ ನಡೆಯುತ್ತಿದೆ ಎಂದು ತಿಳಿಸಿದ್ದರು. ಅದರಂತೆ ಬಾಲಕೃಷ್ಣ ಅವರು 9 ಗಂಟೆಗೆ ಮೈಂದಕೋಡಿ ಬಸ್ ನಿಲ್ದಾಣಕ್ಕೆ ಧಾವಿಸಿದಾಗ ರಕ್ತದ ಮಡುವಿನಲ್ಲಿ ಪದ್ಮ ಪೂಜಾರಿ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೃತದೇಹದ ಕುತ್ತಿಗೆ ಹಿಂಭಾಗ ಹಾಗೂ ಎಡಗೈಗೆ ತಲವಾರಿನಿಂದ ಇರಿಯಲಾಗಿತ್ತು.

ಕೊಲೆಯ ಮಾಹಿತಿ ಪಡೆದ ಬೆಳ್ತಂಗಡಿ ಠಾಣಾ ಪೊಲೀಸರು ಘಟನಾಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಂಜೀವ ಪೂಜಾರಿ ತಲೆಮರೆಸಿ ಕೊಂಡಿದ್ದು, ಕೃತ್ಯಕ್ಕೆ ಬಳಸಿದ ತಲವಾರನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ಬೆಳ್ತಂಗಡಿ ಠಾಣಾ ಎಸ್.ಐ. ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ಆರೋಪಿಯ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ಪದ್ಮನಾಭ ಪೂಜಾರಿ ಕೂಲಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣರ ಮನೆಯ ಪಕ್ಕವೇ ಸಂಜೀವರ ಮನೆಯೂ ಇದೆ. ಇಬ್ಬರ ಮಧ್ಯೆ ಕೆಲಸಮಯದ ಹಿಂದೆ ನಡೆದ ಸಣ್ಣದೊಂದು ಘಟನೆ ವೈಮನಸ್ಸಿಗೆ ಕಾರಣವಾಗಿತ್ತು ಎನ್ನಲಾಗಿದೆ. ಆ ಬಳಿಕ ಇಬ್ಬರೂ ದ್ವೇಷ ಬೆಳೆಸಿಕೊಂಡು ಕೆಕ್ಕರಿಸಿ ನೋಡುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಇಬ್ಬರೂ ಕೊಯ್ಯೂರು ಪೇಟೆಗೆ ತೆರಳಿ ಮದ್ಯ ಸೇವಿಸುವುದು ನಿತ್ಯದ ಹವ್ಯಾಸವಾಗಿತ್ತು. ಪೇಟೆಯಿಂದ ನಡೆದುಕೊಂಡು ಬರುವಾಗ ಈ ಹಿಂದೆಯೂ ಇಬ್ಬರೂ ಜಗಳವಾಡಿದ್ದರು, ಆಗೆಲ್ಲ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸುತ್ತಿದ್ದರು. ಆದರೆ ನಿನ್ನೆ ಕುಡಿತದ ಅಮಲಿನಲ್ಲಿ ನಡೆದ ಜಗಳ ತಾರಕಕ್ಕೇರಿ ಪದ್ಮನಾಭ ಪೂಜಾರಿ ಇನ್ನಿಲ್ಲವಾದರೆ ಸಂಜೀವ ಪೂಜಾರಿ ಜೈಲಿನ ಹಾದಿ ತುಳಿಯುವಂತಾಗಿದೆ.

Write A Comment