ಕನ್ನಡ ವಾರ್ತೆಗಳು

ಕುಂದಾಪುರದ ಕುಂದಬಾರಂದಾಡಿಯಲ್ಲಿ ಕುಡಿಯುವ ನೀರಿಗೆ ಕುತ್ತು ಬಂದರೂ ಕ್ಯಾರೇ ಅನ್ನುತ್ತಿಲ್ಲ ಗ್ರಾಮಪಂಚಾಯತ್

Pinterest LinkedIn Tumblr

(ಚಿತ್ರ,ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬೇಸಿಗೆ ಬಂತೆಂದರೇ ಸಾಕು. ಕುಂದಾಪುರ ತಾಲೂಕಿನ ಹಲವೆಡೆಗಳಲ್ಲಿ ಬಾವಿ ನೀರು ಕುಡಿಯಲು ಯೋಗ್ಯವಾಗದೇ ಇರೋದು ವರ್ಷಂಪ್ರತಿ ಸಾಮಾನ್ಯ. ಜನರ ಅನುಕೂಲಕ್ಕಾಗಿ ಅಲ್ಲಲ್ಲಿ ಬೋರ್ ವೆಲ್ (ಕೊಳವೆ ಬಾವಿ) ಇದ್ದರೂ ಕೂಡ ಗ್ರಾಮಪಂಚಾಯತ್ ಅವ್ಯವಸ್ಥೆಯಿಂದಾಗಿ ಅಲ್ಲಲ್ಲಿ ಜನರಿಗೆ ನೀರು ಸಿಗದ ನಿದರ್ಶನಗಳು ಇದೆ. ಹೀಗೆ ಕೊಳವೆಬಾವಿ ಇದ್ದು ಜನರಿಗೆ ನೀರು ಸಿಗದ ಊರು ಕುಂದಾಪುರ ತಾಲೂಕಿನ ಕುಂದಬಾರಂದಾಡಿ.

ಕುಂದಾಪುರದ ಹಕ್ಲಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಪುಟ್ಟಗ್ರಾಮವೇ ಕುಂದಬಾರಂದಾಡಿ. ಇಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಕೊಳವೆ ಬಾವಿಯೊಂದನ್ನು ಎರಡು ದಶಕಗಳ ಹಿಂದೆ ನಿರ್ಮಿಸಲಾಗಿತ್ತು. ಸ್ಥಳಿಯ ಹತ್ತಾರು ಮನೆಗಳಿಗೆ ಈ ನೀರು ಉಪಯೋಗಕ್ಕೆ ಬರುತ್ತಿತ್ತು. ಆದರೇ ಕೆಲವು ಸಮಯಗಳಿಂದ ಈ ಕೊಳವೆಬಾವಿಗೆ ಮೋಟಾರ್ ಪಂಪು ಅಳವಡಿಸಿ ಸ್ಥಳೀಯ ಸಹಕಾರಿ ಸಂಘವೊಂದು ನೀರು ಪೂರೈಕೆ ಮಾಡಿಕೊಳ್ಳುತ್ತಿದ್ದು, ಬಿರು ಬೇಸಿಗೆಯ ಈ ಸಮಯದಲ್ಲಿ ಕೊಳವೆ ಬಾವಿ ಒತ್ತುವರಿಯಿಂದಾಗಿ ಈ ಭಾಗದ ಜನರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.

Kundapura_Hakladi_Water Problem (4) Kundapura_Hakladi_Water Problem (5) Kundapura_Hakladi_Water Problem (7) Kundapura_Hakladi_Water Problem (6) Kundapura_Hakladi_Water Problem (8) Kundapura_Hakladi_Water Problem (2) Kundapura_Hakladi_Water Problem (10) Kundapura_Hakladi_Water Problem (3) Kundapura_Hakladi_Water Problem (9) Kundapura_Hakladi_Water Problem (1) Kundapura_Hakladi_Water Problem (12) Kundapura_Hakladi_Water Problem (11)

ಕುಂದಬಾರಂದಾಡಿ ಹಾಲು ಡೇರಿ ಆವರಣದಲ್ಲಿದ್ದ ಈ ಕೊಳವೆ ಬಾವಿಯ ನೀರು ಸೇದುವ ಹ್ಯಾಂಡಲ್ ಕಿತ್ತೆಸೆದು ಅದಕ್ಕೆ ಮೋಟಾರ್ ಅಳವಡಿಸಿ ಹಾಲು ಡೇರಿಯವರು ನೀರು ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ, ಇದಕ್ಕೆ ಹಕ್ಲಾಡಿ ಗ್ರಾಮಪಂಚಾಯತ್ ಕೂಡ ಕುಮ್ಮಕ್ಕು ನೀಡುತ್ತಿದೆ ಎನ್ನುವ ಗಂಭೀರ ಆರೋಪವನ್ನು ಈ ಭಾಗದ ಸ್ಥಳೀಯರು ಮಾಡುತ್ತಿದ್ದಾರೆ. ಇನ್ನು ಸಹಕಾರಿ ಸಂಘ ಕೊಳವೆ ಬಾವಿಗೆ ಮೋಟಾರ್ ಅಳವಡಿಸಿದ್ದಲ್ಲದೇ ಸಾರ್ವಜನಿಕ ಉಪಯೋಗಕ್ಕಾಗಿ ಇರುವ ಬಾವಿಯ ನೀರನ್ನು ನಮಗೆ ನೀಡುತ್ತಿಲ್ಲ. ಈ ಕೊಳವೆ ಬಾವಿ ಸಮೀಪವೇ ಇನ್ನೊಂದು ಕೊಳವೆ ಬಾವಿ ನಿರ್ಮಿಸಿ ಅದಕ್ಕೆ ಸಿಂಥೆಟಿಕ್ ಟ್ಯಾಂಕ್ ಅಳವಡಿಸಿದರೂ ಕೂಡ ಆ ಬಾವಿಯಲ್ಲಿ ನೀರು ಕಡಿಮೆಯಿರುವ ಕಾರಣ ಜನರಿಗೆ ಅಗತ್ಯಕ್ಕೆ ತಕ್ಕಷ್ಟು ನೀರು ಸಿಗುತ್ತಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಈ ಬಗ್ಗೆ ಗ್ರಾಮಪಂಚಾಯತ್ ಸೇರಿದಂತೆ ಸಂಬಂದಪಟ್ಟ ಎಲ್ಲಾ ಜನಪ್ರತಿನಿಧಿಗಳಿಗೂ ಮನವಿಯನ್ನು ನೀಡಿದರೂ ಕೂಡ ಯಾರೊಬ್ಬರು ಇಲ್ಲಿನ ಜನರ ಸಮಸ್ಯೆಗೆ ಸ್ಪಂಧಿಸಿಲ್ಲವಂತೆ. ಇನ್ನು ಹತ್ತಾರು ಮನೆಗಳಿರುವ ಈ ಭಾಗದಲ್ಲಿ ಒಂದು ಸಾರ್ವಜನಿಕ ಬಾವಿಯಿದ್ದು ಬಾವಿಯ ತಳಭಾಗದಲ್ಲಿರುವ ನೀರು ಕೆಂಬಣ್ಣಕ್ಕೆ ತಿರುಗಿ ಕುಡಿಯಲು ಯೋಗ್ಯವಾಗಿಲ್ಲ. ಆದರೂ ಕೂಡ ಜನರು ಸದ್ಯ ಅದೇ ನೀರನ್ನು ಅವಲಂಭಿಸಬೇಕಿರುವ ಅನಿವಾರ್ಯತೆಯಿದೆ. ಇನ್ನು ತೆಂಗು, ಬಾಳೆ ಸೇರಿದಂತೆ ಮನೆಯ ಗಿಡಮರಗಳು ನೀರು ಕಾಣದೆ ಹಲವು ತಿಂಗಳುಗಳೆ ಕಳೆದಿವೆ ಎನ್ನುತ್ತಾರೆ ಜನರು. ಇನ್ನು ಹಣ ಖರ್ಚು ಮಾಡಿ ಮನೆ ಮನೆಗೆ ನಳ್ಳಿ ಅಳವಡಿಸಿಕೊಂಡಿದ್ದರೂ ಕೂಡ ಆ ನಳ್ಳಿಯಲ್ಲಿ ನೀರು ಬಂದ ಉದಾಹರಣೆಗಳೇ ಇಲ್ಲ.

ನಮಗೆ ಮೊದಲಿನ ರೀತಿಯೇ ಹ್ಯಾಂಡಲ್ ಇರುವ ಕೊಳವೆ ಬಾವಿ ವ್ಯವಸ್ಥೆ ಮಾಡಿಕೊಡಿ ನಾವು ಬೋರ್ ಹೊಡೆದು ನೀರು ತೆಗೆದುಕೊಳ್ಳುತ್ತೇವೆ. ನಮಗೆ ಈಗ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ಒಂದೆ ಕೊಳವೆ ಬಾವಿ ಸರಿಪಡಿಸಿ ಇಲ್ಲವೇ ಮನೆಯ ನಳ್ಳಿಗೆ ನೀರು ಬರುವ ವ್ಯವಸ್ಥೆ ಮಾಡಿಕೊಡಿ ಎನ್ನುತ್ತಾರೆ ಈ ಭಾಗದ ಮಹಿಳೆಯರು.

ಒಟ್ಟಿನಲ್ಲಿ ಎರಡು ಕೊಳವೆ ಬಾವಿ ಒಂದು ಸಾರ್ವಜನಿಕ ಕುಡಿಯುವ ನೀರಿನ ಬಾವಿ ಈ ಭಾಗದಲ್ಲಿದ್ದರೂ ಕೂಡ ಕುಡಿಯುವ ನೀರು ಹಾಗೂ ನಿತ್ಯೋಪಯೋಗಕ್ಕಾಗಿ ನೀರು ಸಿಗದೇ ಕುಂದಬಾರಂದಾಡಿ ಜನರು ಗೋಳು ಅನುಭವಿಸುತ್ತಿದ್ದಾರೆ. ಅವರ ನೀರಿನ ವ್ಯಥೆಗೆ ಇನ್ನಾದರೂ ಪರಿಹಾರ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.

Write A Comment