ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ವಂಚಕರ ಜಾಲದ ಕರಾಮತ್ತು : ಕೆಮರಾ ಖರೀದಿಸಿ ರೂ. 1,67,500 ಮುಖಬೆಲೆಯ ನಕಲಿ ಡಿ.ಡಿ. ನೀಡಿ ಪರಾರಿ

Pinterest LinkedIn Tumblr

Pvs_canon_camara_1

ಮಂಗಳೂರು: ನಗರದ ಪಿವಿಎಸ್‌ ಜಂಕ್ಷನ್‌ ಬಳಿ ಇರುವ ಕೆಮರಾ ಮಾರಾಟ ವ್ಯವಹಾರ ಮಳಿಗೆಯಲ್ಲಿ ಕೆಮರಾ ಖರೀದಿಸಿರುವ ವಂಚಕರ ಜಾಲವೊಂದು ನಕಲಿ ಡಿಮಾಂಡ್‌ ಡ್ರಾಫ್ಟ್‌ ನೀಡಿ ಮಳಿಗೆಗೆ ಮೋಸಗೋಳಿಸಿದ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೈಸೂರಿನಲ್ಲಿ ಕೂಡ ಇದೇ ರೀತಿ ಒಂದು ಕೆಮರಾ ಮಾರಾಟ ಮಳಿಗೆಗೆ ಹಾಗೂ ಕಂಪ್ಯೂಟರ್‌ ವ್ಯವಹಾರ ಮಳಿಗೆಗೂ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು, ಇದೀಗ ಈ ಪ್ರಕರಣದಿಂದ ಮಂಗಳೂರಿನಲ್ಲೂ ನಕಲಿ ಡಿಮಾಂಡ್‌ ಡ್ರಾಫ್ಟ್‌ ನೀಡಿ ಕೆಮರಾ, ಕಂಪ್ಯೂಟರ್‌ ಮತ್ತಿತರ ಬೆಲೆ ಬಾಳುವ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಖರೀದಿಸುವ ವಂಚಕರ ಜಾಲವೊಂದು ಸಕ್ರಿಯವಾಗಿರುವುದು ಖಚಿತವಾಗಿದೆ.

ನಗರದ ಪಿವಿಎಸ್‌ ಜಂಕ್ಷನ್‌ ಬಳಿ ಇರುವ ಕೆಮರಾ ಮಾರಾಟ ವ್ಯವಹಾರ ಮಳಿಗೆಗೆ ಮಾ.16 ರಂದ ಸಂಜೆ ಬಂದಿದ್ದ ಇಬ್ಬರು ಹಿಂದಿ ಮಾತನಾಡುವ ಅಪರಿಚಿತರು ಕೆಮರಾಗಳನ್ನು ಪರಿಶೀಲಿಸಿ ಇವತ್ತು ತಾವು ಕ್ಯಾಶ್‌ ಹಣ ತಂದಿಲ್ಲ, ನಾಳೆ ಬರುತ್ತೇವೆ ಎಂದು ಹೇಳಿ ಹೋಗಿದ್ದರು. ಮರುದಿನ ಸಂಜೆ ಬಂದು ತಮಗೆ ಕ್ಯಾನನ್‌ 700ಬಿ ಮತ್ತು 7ಡಿ ಮಾರ್ಕ್‌ನ ಕೆಮರಾ ಬೇಕು, ಆರ್ಡರ್‌ ಮಾಡಿ ಎಂದು ಹೇಳಿ ಹೋಗಿದ್ದರು.

Pvs_canon_camara_2

Pvs_canon_camara_3 Pvs_canon_camara_4

3ನೇ ದಿನ (ಶನಿವಾರ)ಫೋನ್‌ ಮಾಡಿ ಕೆಮರಾ ಸ್ಟಾಕ್‌ ಇದೆಯೇ ಎಂಬುದಾಗಿ ವಿಚಾರಿಸಿ, ಈಗ ಬರುತ್ತೇವೆ ಎಂದು ಹೇಳಿದ್ದರು. ಕೆಲವೇ ನಿಮಿಷಗಳಲ್ಲಿ ಮತ್ತೆ ಫೋನ್‌ ಮಾಡಿ ‘ನಮ್ಮ ಕಾರು ಹಾಳಾಗಿದೆ; ಟ್ಯಾಕ್ಸಿ ಡ್ರೈವರ್‌ನನ್ನು ಕಳುಹಿಸುತ್ತೇವೆ’ ಎಂದು ತಿಳಿಸಿದ್ದರು.

ಹಾಗೆ ಬೆಳಗ್ಗೆ 10.30ರ ವೇಳೆಗೆ ಬಂದ ವ್ಯಕ್ತಿ ತನ್ನ ಹೆಸರು ಅಬ್ದುಲ್ಲ ಎಂದು ಪರಿಚಯಿಸಿ 1,67,500 ರೂ. ಮುಖಬೆಲೆಯ ಡಿಮಾಂಡ್‌ ಡ್ರಾಫ್ಟ್‌ ನೀಡಿ ಎರಡು ಕೆಮರಾಗಳನ್ನು ಪಡೆದುಕೊಂಡು ಹೋಗಿದ್ದ. ಆರೋಪಿಗಳು ಕಾರವಾರದ ಸಂಸ್ಥೆಯೊಂದರ ಹೆಸರಿನಲ್ಲಿ ಸಿಂಡಿಕೇಟ್‌ ಬ್ಯಾಂಕಿನ ಮುಂಬಯಿ ಶಾಖೆಯ ಡಿಡಿಯನ್ನು ಮಂಗಳೂರಿನ ಬ್ಯಾಂಕ್‌ ಶಾಖೆಯಲ್ಲಿ ಪಾವತಿಯಾಗುವಂತೆ ನೀಡಿದ್ದರು.

ಮಳಿಗೆಯ ಮಾಲಕರು ಸೋಮವಾರ ಡಿ.ಡಿಯನ್ನು ಬ್ಯಾಂಕಿಗೆ ಹಾಕಿದ್ದರು. ಮರುದಿನ ಡಿ.ಡಿಬಗ್ಗೆ ವಿಚಾರಿಸಿದಾಗ ಅದು ನಕಲಿ ಎಂದು ಬ್ಯಾಂಕಿನವರು ತಿಳಿಸಿದ್ದರು. ಬಳಿಕ ಕೆಮರಾ ಕೊಂಡೊಯ್ದವರ ಫೋನ್‌ ನಂಬರ್‌, ಕಾರವಾರದಲ್ಲಿ ಇದೆ ಎಂದು ಹೇಳಿದ್ದ ಸಂಸ್ಥೆ ಎಲ್ಲವೂ ಬೋಗಸ್‌ ಎಂದು ತಿಳಿದು ಬಂತು.

ಈ ಬಗ್ಗೆ ಮಳಿಗೆಯ ಮಾಲಕರಾದ ಸುಧಾಕರ್ ಶೆಣೈ ಅವರು ಬಂದರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

Write A Comment