ನವದೆಹಲಿ: ಭಾನುವಾರ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 10 ಓವರ್ ಮುಗಿದಾಗ ನಾವು ವಿಶ್ವಕಪ್ ನಿಂದ ಹೊರ ಬಿದ್ದೆವು ಎಂದೇ ಅನಿಸಿಬಿಟ್ಟತ್ತು. ಆದರೆ ಎಂಎಸ್ ಧೋನಿಯ ಸಹಾಯದಿಂದ ನಾವು ಟಾರ್ಗೆಟ್ ತಲುಪಿದೆವು. ಪಂದ್ಯ ಆಡುತ್ತಿದ್ದ ವೇಳೆ ನಾನೇನು ಮಾಡುತ್ತಿದ್ದೇವೆ? ಇಲ್ಲಿ ಏನು ನಡೆಯುತ್ತಿದೆ? ಎಂದೇ ನನಗೆ ಗೊತ್ತಾಗಲಿಲ್ಲ. ಅಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕಾಗಿ ಈ ಕೊಡುಗೆ ನೀಡಿರುವ ಬಗ್ಗೆ ನಾನು ಅಭಾರಿಯಾಗಿದ್ದೇನೆ ಎಂದು ಬಿಸಿಸಿಐ. ಟಿವಿ ಜತೆ ಮಾತನಾಡಿದ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಧೋನಿ ಗೆಲುವಿನ ರನ್ ಹೊಡೆದಾಗ ನಾನು ಭಾವುಕನಾಗಿ ಬಿಟ್ಟೆ. ನನಗೇನು ಹೇಳಬೇಕೆಂದು ತಿಳಿಯದಾಯಿತು. ಕ್ರೀಡೆ ಎಂದರೆ ಹೀಗೆಯೇ. ಕ್ರೀಡಾಪಟುವಾಗಿರುವಾಗ ಇಂಥಾ ಕ್ಷಣಗಳನ್ನು ಹೇಗೆ ಪ್ರಕಟಿಸಬೇಕು ಎಂದು ನನಗೆ ಗೊತ್ತಾಗಲಿಲ್ಲ. ನಮ್ಮ ತಂಡದ ಸ್ಮರಣೀಯ ಘಳಿಗೆ ಅದಾಗಿತ್ತು. ನಮ್ಮ ತಂಡದ ಸದಸ್ಯರು ಖುಷಿ ಪಡುತ್ತಿರುವುದನ್ನು ನೋಡುವುದೇ ಖುಷಿ.
ಕೊನೆಯ ಮೂರು ಓವರ್ಗಳಲ್ಲಿ 39 ರನ್ಗಳನ್ನು ಗಳಿಸಬೇಕಾದ ಒತ್ತಡ, ಇಂಥಾ ಇನ್ನಿಂಗ್ಸ್ ನಾನು ಇದುವರೆಗೆ ಆಡಲೇ ಇಲ್ಲ. ಇನ್ನೊಂದು ಬದಿಯಲ್ಲಿ ಧೋನಿ ಇದ್ದರು, ಆದ ಕಾರಣವೇ ನಾನು ಆ ಹೊಡೆಬಡಿ ಆಟವನ್ನು ನೀಡಲು ಸಹಾಯವಾಯ್ತು.
18 ನೇ ಓವರ್ನಲ್ಲಿ ಜೇಮ್ಸ್ ಫಾಂಕ್ನರ್ ನ್ನು ಟಾರ್ಗೆಟ್ ಮಾಡಿದೆ
ಬೌಂಡರಿ ಹೊಡೆಯಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದೆ. 18 ನೇ ಓವರ್ ನಲ್ಲಿ ಜೇಮ್ಸ್ ಫಾಂಕ್ನರ್ನ್ನೇ ಟಾರ್ಗೆಟ್ ಮಾಡಬೇಕೆಂದು ಲೆಕ್ಕ ಹಾಕಿದೆ. 3 ಓವರ್ಗಳಲ್ಲಿ 39 ರನ್! ಅದರಲ್ಲಿ ಒಂದು ಓವರ್ ಚೆನ್ನಾಗಿ ಆಡಬೇಕು, 15 ರನ್ ಗಳನ್ನಾದರೂ ಗಳಿಸಬೇಕು ಎಂದಿತ್ತು. ಆದರೆ ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚು ರನ್ (19 ರನ್) ಆ ಓವರ್ ನಲ್ಲಿ ಬಂತು. 16ನೇ ಓವರ್ಗಿಂತ ಮುಂಚೆ ನಾವು ಅಷ್ಟೊಂದು ಬೌಂಡರಿ ಹೊಡೆಯಲು ಸಾಧ್ಯವಾಗುವುದಿಲ್ಲ, ಪಿಚ್ ಫ್ಲಾಟ್ ಆಗಿರುವುದರಿಂದ ಅಂತಿಮ ಗಳಿಗೆಯಲ್ಲಿ ಕಷ್ಟ ಪಡಬೇಕಾಗಿ ಬರುತ್ತದೆ ಎಂದು ಅಂದುಕೊಂಡಿದ್ದೆ.
ಎಸೆತಗಳು ತುಂಬಾ ನಿಧಾನವಾಗಿದ್ದವು. ಆ ಹೊತ್ತಲ್ಲಿ ಅಲ್ಲಿ ನಿಂತುಕೊಂಡು ಎಲ್ಲ ಬಾಲ್ಗಳನ್ನು ಸಮರ್ಥವಾಗಿ ನಿಭಾಯಿಸುವುದು ಅಗತ್ಯವಾಗಿತ್ತು. ಅಲ್ಲಿ ಆಸ್ಟ್ರೇಲಿಯಾದ ಕ್ಷೇತ್ರ ರಕ್ಷಣೆಯೂ ಶಕ್ತವಾಗಿತ್ತು. ಆದರೆ ಇನ್ನೊಂದು ಬದಿಯಲ್ಲಿದ್ದ ಧೋನಿ ಎರಡು ರನ್ಗಳನ್ನು ಗಳಿಸುತ್ತಿದ್ದದ್ದು, ನನಗೆ ಬಲ ನೀಡಿತು.
ಧೋನಿ ಎರಡು ರನ್ಗಳಿಗಾಗಿ ಓಡುತ್ತಿದ್ದದ್ದು ತುಂಬಾನೇ ಸಹಾಯವಾಯಿತು. ಇದರಿಂದ ವಿರುದ್ಧ ತಂಡದ ಮೇಲೆ ಒತ್ತಡ ಹೇರುವಂತೆ ಆಯಿತು. ಯಾವುದೇ ರಿಸ್ಕ್ ಇಲ್ಲದೆಯೇ ಒಂದು ರನ್ ತೆಗೆದುಕೊಳ್ಳುವಲ್ಲಿ ಎರಡು ರನ್ಗಳನ್ನು ಕಬಳಿಸುತ್ತಿರುವುದು ಆಸ್ಟ್ರೇಲಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು .
ಇದಕ್ಕೆಲ್ಲಾ ಥ್ಯಾಂಕ್ಸ್ ಹೇಳಬೇಕಾಗಿರುವುದು ಧೋನಿಗೆ. ಆತ ನನ್ನನ್ನು ತಾಳ್ಮೆಯಿಂದ ಇರುವಂತೆ ಮಾಡಿದರು. ನೀನು ನಿನ್ನ ವಲಯದಲ್ಲೇ ರನ್ ಬಾರಿಸು. ಹಲವಾರು ಬಾಲ್ಗಳಿಂದ ಇನ್ನೂ ರನ್ ಬಾರಿಸುವುದಿದೆ. ಎಲ್ಲ ಒತ್ತಡವನ್ನು ಅನುಭವಿಸಿ ಬ್ಯಾಟಿಂಗ್ ಮತ್ತು ಅತಿಯಾದ ಉತ್ಸುಕತೆಯಿಂದ ರನ್ ಬಾರಿಸುವುದಕ್ಕೆ ನಾನು ಮುಂದಾಗದಂತೆ ಆತ ನೋಡಿಕೊಂಡು ಸಂಯಮದಿಂದ ಇರುವಂತೆ ಮಾಡಿದರು. ನಿನಗೆ ಇದು ಸಾಧ್ಯ ಎಂದು ಆತ ನನ್ನನ್ನು ಹುರಿದುಂಬಿಸುತ್ತಿದ್ದರು. ಈ ರೀತಿ ಗುರಿಯನ್ನು ಬೆನ್ನಟ್ಟಿರುವ ಪಂದ್ಯವನ್ನು ಯಾವ ರೀತಿ ವಿವರಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ಈ ಬಗ್ಗೆ ಜನರೇ ಹೇಳಬೇಕು. ನನ್ನ ದೇಶಕ್ಕಾಗಿ ಆಡುವುದನ್ನು ನಾನು ಇಷ್ಟಪಡುತ್ತೇನೆ.
ಅಂದಹಾಗೆ ಇದೊಂದು ಅದ್ಭುತ ಪಂದ್ಯವಾಗಿತ್ತು ಎಂದು ಕ್ರಿಕೆಟ್ ಪ್ರೇಮಿಗಳು ಹೇಳುತ್ತಾರೆ. ಇದು ನನ್ನೊಬ್ಬನಿಂದ ಮಾತ್ರ ಸಾಧ್ಯವಾಗಿದ್ದಲ್ಲ. ಇಲ್ಲಿ ಎಲ್ಲರ ಕೊಡುಗೆಯೂ ಇದೆ. ನಾನು 82 ರನ್ಗಳನ್ನಷ್ಟೇ ಬಾರಿಸಿದೆ, ಈ ಪಂದ್ಯದಲ್ಲಿನ ಎಲ್ಲ ರನ್ ಗಳನ್ನು ನಾನೊಬ್ಬನೇ ಬಾರಿಸಲಿಲ್ಲ. ಇನ್ನಿತರರೂ ರನ್ಗಳನ್ನು ಬಾರಿಸಿದ್ದಾರೆ. ಈ ಗೆಲುವಿನ ಪ್ರಶಂಸೆ ಎಲ್ಲರಿಗೂ ಸಲ್ಲಬೇಕಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.