
ಮಂಗಳೂರು,ಮಾ.26 : ನೇತ್ರಾವತಿ ಸೇತುವೆಯ ಮೇಲೆ ಯುವಕನೊಬ್ಬನ ಶವ ಸಂಶಯಾಸ್ಪದ ರೀತಿಯಲ್ಲಿ ಶನಿವಾರ ಮುಂಜಾನೆ ಪತ್ತೆಯಾಗಿದೆ. ಸಕಲೇಶಪುರ ನೋಂದಣಿ ಹೊಂದಿರುವ(ಕೆಎ 16 ಜೆ.7278) ಕೆಂಪು ಬಣ್ಣದ ಪಲ್ಸರ್ ಬೈಕ್ ಮೃತದೇಹದ 100 ಮೀ. ದೂರದಲ್ಲಿ ನಿಂತ ಸ್ಥಿತಿಯಲ್ಲಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ತಡರಾತ್ರಿಯಿಂದ ಶನಿವಾರ ಮುಂಜಾನೆಯ ಒಳಗೆ ಘಟನೆ ನಡೆದಿರಬೇಕೆಂದು ಶಂಕಿಸಲಾಗಿದ್ದು, ಮೃತ ಪಟ್ಟ ಯುವಕ ಸುಮಾರು 30 ವಯಸ್ಸಿನ ವ್ಯಕ್ತಿಯಾಗಿದ್ದು
ಮೃತದೇಹದ ಬಳಿ ಮೊಬೈಲ್, ಪರ್ಸ್ ಇನ್ನಿತರ ಯಾವುದೇ ಸೊತ್ತುಗಳು ಇರದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಹಳೆ ಸೇತುವೆಯ ಮೇಲಿನ ಡಾಮರೀಕರಣ ಕಾರ್ಯ ಪ್ರಗತಿಯಲ್ಲಿದ್ದು, ದ್ವಿಚಕ್ರ ವಾಹನ ಸವಾರರ ಸಂಚಾರಕ್ಕೆ ಸಾಕಷ್ಟು ಸ್ಥಳಾವಕಾಶವಿದೆ. ಬೈಕ್ ಅಪಘಾತದಲ್ಲಿ ಆತ ಸಾವನ್ನಪ್ಪಿದ್ದರೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಬೇಕಿತ್ತು. ಆದರೆ ಹಾಗಾಗದೇ ಇರುವುದು ಕೊಲೆ ಶಂಕೆ ವ್ಯಕ್ತವಾಗಲು ಕಾರಣವಾಗಿದೆ.
ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವೆನ್‌ಲಾಕ್ ಶವಾಗಾರಕ್ಕೆ ಸಾಗಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.