
ಮಂಗಳೂರು,ಮಾ.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆಯ ಹೊಸ ನೀತಿಯ ಪರಿಣಾಮ ಎದುರಾಗಿರುವ ಸಮಸ್ಯೆಗಳ ವಿರುದ್ಧ ದ.ಕ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಶ ನ್‌ನ ನೇತೃತ್ವದಲ್ಲಿಂದು ದ.ಕ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಸಿವಿಲ್ ಎಂಜಿನಿಯರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ವಿಜಯ ವಿಷ್ಣು ಮಯ್ಯ ಅವರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಮರಳು ಪೂರೈಕೆಗೆ ನಿಷೇಧ ಹೇರುವ ಮೂಲಕ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ನಮ್ಮ ಹೊಟ್ಟೆಗೆ ಹೊಡೆದು ಅವರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಪಾರಂಪರಿಕವಾಗಿ ನಡೆಸಿಕೊಂಡು ಬಂದ ಮರಳುಗಾರಿಕೆ ಯನ್ನು ಎರಡು ತಿಂಗಳಿನಿಂದ ಸ್ಥಗಿತಗೊಳಿಸಿರುವುದು ಖಂಡನೀಯ ಎಂದರು.

ಮರಳುಗಾರಿಕೆಗೆ ಅವಕಾಶ ಕಲ್ಪಿಸಿಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ಮನೆ ಮುಂಭಾಗದಲ್ಲಿ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.
ಅಸೋಸಿಯೇಶನ್ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾತನಾಡಿ, ಮರಳುಗಾರಿಕೆಯ ಪರವಾನಿಗೆಯನ್ನು ನವೀಕರಿಸದ ಕಾರಣವನ್ನು ಮುಂದಿಟ್ಟುಕೊಂಡು ಜಿಲ್ಲಾಧಿಕಾರಿಯವರು ಮರಳುಗಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಎಲ್ಲ ತರಹದ ಕಟ್ಟಡ ಕಾಮಗಾರಿಗಳಿಗೆ ಮರಳಿನ ಲಭ್ಯತೆ ಇಲ್ಲದೇ, ಗುತ್ತಿಗೆದಾರರು ಕಾಮಗಾರಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಸ್ಥಿತಿಗೆ ಬಂದಿದೆ. ಅಧಿಕಾರಿಗಳು ನಗರದ ಜನತೆಯ ಹಿತದೃಷ್ಟಿಯ ಬದಲಾಗಿ ಕೆಲವು ಮಂತ್ರಿಗಳ ಹಿತದೃಷ್ಟಿಯನ್ನಷ್ಟೇ ಬಯಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆನರಾ ಬಿಲ್ಡರ್ ಅಸೋಸಿಯೇಶನ್‌ನ ಸುದೇಶ್ ಕುಮಾರ್, ಅಸೋಸಿಯೇಶನ್ ಉಪಾಧ್ಯಕ್ಷ ದಿನಕರ್ ಸುವರ್ಣ, ಕಾರ್ಯದರ್ಶಿ ದೇವಾನಂದ, ಜತೆ ಕಾರ್ಯದರ್ಶಿ ಅಶೋಕ್ ಕುಲಾಲ್, ಖಜಾಂಚಿ ಸುರೇಶ್ ಜೆ. ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.