
ಮಂಗಳೂರು,ಮಾ.22 : ಗುರುಪುರದಲ್ಲಿ ಬೈಪಾಸ್ ಹಾಗೂ ಹೊಸದಾಗಿ ಗುರುಪುರ ಸೇತುವೆ ನಿರ್ಮಾಣವಾಗಲಿದೆ. ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಭೂಸ್ವಾಧೀನ ಪರಿಹಾರ ಮೊತ್ತ ಈಗಾಗಲೇ ಬಿಡುಗಡೆಯಾಗಿದೆ. ಕಾಮಗಾರಿ ಆರಂಭವಾಗಿ 18 ತಿಂಗಳಲ್ಲಿ ಕೆಲಸ ಪೂರ್ತಿಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಅವರು, ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರುಗಳಿಗೆ ಮಾಹಿತಿ ನೀಡಿದರು.
ಶಿರಾಡಿ ಘಾಟಿಯಲ್ಲಿ ದ್ವಿತೀಯ ಹಂತದ ಕಾಮಗಾರಿಗೆ ಸಂಬಂಧಪಟ್ಟ ಗುತ್ತಿಗೆದಾರರು ಶೇ. 50ರಷ್ಟು ಸಾಮಗ್ರಿಗಳನ್ನು ಸ್ಥಳದಲ್ಲಿ ಶೇಖರಿಸಬೇಕಾದ ನಿಯಮವಿದೆ. ಸಾಮಗ್ರಿ ಸಂಗ್ರಹ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ. ಕಳೆದ ಸೆಪ್ಪಂಬರ್‌ನಲ್ಲಿ ಗುತ್ತಿಗೆದಾರರು ಕೆಲಸ ವಹಿಸಿಕೊಂಡಿದ್ದು ಈಗಾಗಲೇ 6 ತಿಂಗಳು ಕಳೆದಿವೆ ಎಂದು ಎಂಜಿನಿಯರ್ ತಿಳಿಸಿದರು. ಈ ಬಗ್ಗೆ ಸಂಬಂಧಪಟ್ಟವರ ಸಭೆ ಕರೆದು ಪೂರಕ ಕ್ರಮ ಕೈಗೊಳ್ಳುವುದಾಗಿ ಸಂಸದ ನಳಿನ್ ಕುಮಾರ್ ತಿಳಿಸಿದರು. ಶಿರಾಡಿಯಲ್ಲಿ ಸುರಂಗ ಮಾರ್ಗ ಯೋಜನೆ ಡಿಪಿಆರ್ ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ರಾ.ಹೆ. 66ರಲ್ಲಿ ಸುರತ್ಕಲ್ ಹಾಗೂ ಕೊಟ್ಟಾರ ಹಾಗೂ ಬಿ.ಸಿ.ರೋಡು ಟೋಲ್‌ಗೇಟ್ ಬಳಿ ಸರ್ವಿಸ್ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿಗಳು ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.
ಬೈಕಂಪಾಡಿಯಲ್ಲಿ ಹೊಸ ಮೇಲ್ಸೇತುವೆಯನ್ನು ತರಾತುರಿಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಿದ ಪರಿಣಾಮ ಅದು ಅಪಘಾತಗಳ ತಾಣವಾಗಿ ಪರಿಣಮಿಸಿದೆ ಎಂದು ನಾಮನಿರ್ದೇಶಿತ ಸದಸ್ಯರು ಗಮನ ಸೆಳೆದರು.
ರಾಷ್ಟ್ರೀಯ ಹೆದ್ದಾರಿಯ ಜಂಕ್ಷನ್‌ಗಳಲ್ಲಿನ ರಸ್ತೆ ವಿಭಜಕಗಳ ನಡುವೆ ತ್ಯಾಜ್ಯ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಯ ತ್ಯಾಜ್ಯಗಳನ್ನು ಸುರಿದು ಕೊಳಗೇರಿಯನ್ನಾಗಿ ಮಾಡಲಾಗಿದೆ. ಜನರು ರಸ್ತೆ ದಾಟಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ನಾಮನಿರ್ದೇಶಿತ ಸದಸ್ಯ ಅಶೋಕ್ ಗಮನ ಸೆಳೆದರು. ಸುರತ್ಕಲ್‌ನಿಂದ ಬಿ.ಸಿ.ರೋಡ್ ವರೆಗೆ 50ಕ್ಕೂ ಅಧಿಕ ಅನಧಿಕೃತ ಜಾಹೀರಾತು ಫಲಕಗಳನ್ನು ಹಾಕಲಾಗಿದೆ. ಕೆಲವು ಬಾರಿ ಇವು ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿವೆ ಎಂದು ಅವರು ದೂರಿದರು.
ಕೇಂದ್ರ ಸರಕಾರ ಅನುದಾನದಡಿ ವಿವಿಧ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು ಅನುದಾನಗಳನ್ನು ಪೂರ್ತಿಯಾಗಿ ವಿನಿಯೋಗಿಸಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ನಾಮನಿರ್ದೇಶಿತ ಸದಸ್ಯರಾದ ಚನಿಲ ತಿಮ್ಮಪ್ಪ, ಗೋಕುಲ್‌ದಾಸ್ ಶೆಟ್ಟಿ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.