ಕನ್ನಡ ವಾರ್ತೆಗಳು

ಲೈಂಗಿಕ ಕಿರುಕುಳ ಆರೋಪ : ಮಾನಸಿಕ ಖನ್ನತೆಯಿಂದ ಅಧ್ಯಾಪಕ ಆತ್ಮಹತ್ಯೆ

Pinterest LinkedIn Tumblr

Vamanjur_case_harish

ಬಂಟ್ವಾಳ, ಮಾ.15 : ಒಂದು ವರ್ಷದ ಹಿಂದೆ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಸುಳ್ಳು ಆರೋಪಕ್ಕೆ ಗುರಿಯಾಗಿ ಮಾನಸಿಕ ಖಿನ್ನತೆಗೊಳಗಾಗಿದ್ದ ನಗರದ ವಾಮಂಜೂರಿನ ಪದವಿ ಪೂರ್ವ ಕಾಲೇಜೊಂದರ ಅಧ್ಯಾಪಕರು ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋಳ್ತಮಜಲು ಗ್ರಾಮದ ಕುಂಟಿಪಾಪು ನಿವಾಸಿ ಹರಿಶ್ಚಂದ್ರ ಆಚಾರ್ (45) ಮೃತ ವ್ಯಕ್ತಿ. ಅವಿವಾಹಿತರಾಗಿದ್ದ ಅವರು ವಾಮಂಜೂರಿನ ಸೈಂಟ್ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಹರಿಶ್ಚಂದ್ರ ಆಚಾರ್ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪೊಲೀಸ್ ದೂರು ಸಲ್ಲಿಸಿದ್ದಳು. ಇದರ ಬೆನ್ನಿಗೇ ಹರಿಶ್ಚಂದ್ರ ಆಚಾರ್ ನಾಪತ್ತೆಯಾಗಿದ್ದರು.

ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹರಿಶ್ಚಂದ್ರ ಆಚಾರ್ ವಿರುದ್ಧದ ಆರೋಪವನ್ನು ಬಲವಾಗಿ ಖಂಡಿಸಿ ಪ್ರತಿಭಟನೆಯನ್ನು ನಡೆಸಿದ್ದರು. ಶಾಲಾಡಳಿತ ಮತ್ತು ವಿದ್ಯಾರ್ಥಿಗಳ ಗುಂಪು ಹರಿಶ್ಚಂದ್ರ ಆಚಾರ್ ರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಅವರೋರ್ವ ಶಿಸ್ತುಬದ್ಧ ಶಿಕ್ಷಕರಾಗಿದ್ದರಿಂದ ಕೆಲವು ವಿದ್ಯಾರ್ಥಿಗಳು ಅವರನ್ನು ದ್ವೇಷಿಸುತ್ತಿದ್ದಾರೆ. ಅವರ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ವಾದಿಸಿದ್ದರು. ಪೊಲೀಸರಿಗೂ ಇದು ಸುಳ್ಳು ಆರೋಪವೆಂದು ಮನದಟ್ಟಾಗಿದ್ದು, ಪ್ರಕರಣವನ್ನು ಅಲ್ಲಿಗೇ ಮುಕ್ತಾಯಗೊಳಿಸಿದ್ದರು. ಈ ಪ್ರಕರಣದಲ್ಲಿ ಹರಿಶ್ಚಂದ್ರ ಆಚಾರ್ ಬಂಧನವಾಗಿರಲಿಲ್ಲ.

ಆ ಬಳಿಕ ಹರಿಶ್ಚಂದ್ರ ಆಚಾರ್ ಕರ್ತವ್ಯಕ್ಕೆ ಪುನಃ ಹಾಜರಾಗಿದ್ದರೂ ಮಾನಸಿಕ ಖಿನ್ನತೆಗೊಳಗಾಗಿದ್ದರು. ಇದಕ್ಕಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು. ತಾನು ಮಾಡದ ಅಪರಾಧಕ್ಕೆ ಕಳಂಕ ತನಗೆ ತಟ್ಟಿದ್ದರಿಂದ ಕೊರಗುತ್ತಿದ್ದ ಹರಿಶ್ಚಂದ್ರ ಆಚಾರ್ ನಿನ್ನೆ ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದಾರೆ. ಬಂಟ್ವಾಳ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Write A Comment