ಕನ್ನಡ ವಾರ್ತೆಗಳು

`ಸಮಾಜದ ಸರ್ವರನ್ನು ಪರಸ್ಪರ ಜೋಡಿಸುವ ಕೆಲಸವಾಗಲಿ’ : ಮಾಣಿಲ ಶ್ರೀ

Pinterest LinkedIn Tumblr

jogi-dharmika-sabhe

ಮಂಗಳೂರು, ಮಾ. 4: ಕದಳೀ ಜೋಗಿ ಮಠದ ಪರ್ಯಾಯ ರಾಜ ಪಟ್ಟಾಭಿಷೇಕದಂತಹ ಅಪರೂಪದ ಮಹೋತ್ಸವದ ಮೂಲಕ ಸಮಾಜದ ಎಲ್ಲಾ ಜಾತಿ, ಮತ, ಪಂಥಗಳ ಜನರನ್ನು ಪರಸ್ಪರ ಜೋಡಿಸುವ ಕೆಲಸವಾಗಲಿ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವದಂಗವಾಗಿ ಜೋಗಿ ಮಠ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ನಡೆದ ಎರಡನೇ ದಿನದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಾಧನೆ ಮಾಡಿದ ಯೋಗಿ, ತ್ಯಾಗಿ, ಸಾಧಕರು ಜೋಗಿ ಮಠದ ರಾಜರಾಗಿ ಪಟ್ಟಾಭಿಷಿಕ್ತರಾಗುವ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದು, ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳವುದರಿಂದ ಸತ್ಕರ್ಮ, ಸತ್ಪಲ ಪ್ರಾಪ್ತಿಯಾಗುವುದರ ಜತೆಗೆ ಇಂತಹ ಕಾರ್ಯಕ್ರಮದ ಮೂಲಕ ಸಮಾಜದ ಸರ್ವರನ್ನು ಬೆಸೆಯುವ ಕಾರ್ಯವಾಗಬೇಕಿದೆ ಎಂದರು.

ಪ್ರಬುದ್ಧವಾದ, ಕೀರ್ತಿವಂತ ಜೋಗಿ ಸಮಾಜ ಬಹಳಷ್ಟು ಸಂಘಟಿತವಾಗಿದೆ. ಸಾಧು, ಸಂತರಿಗೆ ನಿರಂತರ ಪ್ರೋತ್ಸಾಹ ಈ ಸಮುದಾಯದಿಂದ ದೊರೆಯುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಮಾತನಾಡಿ, ಭಾರತದ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ಧನ್ಯರು. ಈ ದೇಶದ ಸಂಸ್ಕೃತಿ, ಆಚಾರ, ವಿಚಾರ ಉದಾತ್ತವಾದುದು. ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಉತ್ತಮ ಪರಿಸರದ ನಿರ್ಮಾಣಕ್ಕೆ ಪೂರಕ ಎಂದರು.

ಇನ್ನೊಬ್ಬ ಮುಖ್ಯ ಅತಿಥಿ ಶ್ರೀ ದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಕದ್ರಿ ಪರಿಸರದೊಂದಿಗೆ ತನ್ನ ಒಡನಾಟವನ್ನು ಸ್ಮರಿಸಿ ಜೋಗಿ ಮಠ ಮತ್ತು ಜೋಗಿ ಸಮಾಜ ಇಂದು ಬಹಳ ಮುಂದುವರೆದಿದೆ, ಈ ಸಮಾಜದಿಂದ ಇನ್ನಷ್ಟು ಸಾಧನೆಯಾಗಲಿ ಎಂದು ಶುಭ ಕೋರಿದರು.

ಎ. ಜೆ. ಸಮೂಹ ಸಂಸ್ಥೆ ಅಧ್ಯಕ್ಷ ಎ. ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಲೈಮಾಮಣಿ ಕದ್ರಿ ಗೋಪಾಲನಾಥ್, ಎಂ. ಎಂ. ಕನ್‌ಸ್ಟ್ರಕ್ಷನ್‌ನ ಮಹಾಬಲ ಕೊಟ್ಟಾರಿ, ಉಡುಪಿ ಜೋಗಿ ಸಮಾಜದ ಮುಂದಾಳು ನವೀನ್ ಕುಮಾರ್ ಜೋಗಿ ಅತಿಥಿಗಳಾಗಿದ್ದರು. ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಬಿ., ಸಲಹೆಗಾರ ಎಂ. ಸುರೇಶ್ ಜೋಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾರನಾಥ ಜೋಗಿ ಮತ್ತು ಶ್ರೀಧರ ಜೋಗಿ ಕಣಂತೂರುರವರನ್ನು ಸನ್ಮಾನಿಸಲಾಯಿತು.

ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ್ ಸ್ವಾಗತಿಸಿದರು. ಕೇಶವ ಕದ್ರಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಜೋಗಿ ಸಮಾಜದ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.

Write A Comment