ಕನ್ನಡ ವಾರ್ತೆಗಳು

‘ಆಧಾರಕ್ಕೆ ಅಲೆದಾಟ ಬೇಡ’; ಬೀಜಾಡಿಯಲ್ಲಿ 2 ದಿನದ ಆಧಾರ್‌ಕಾರ್ಡ್ ನೋಂದಣೆ ಆಂದೋಲನ ಉದ್ಘಾಟನೆ

Pinterest LinkedIn Tumblr

ಕುಂದಾಪುರ: ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಆಧಾರ್ ಇಂದಿನ ಪ್ರತಿಯೊಂದು ಕಾರ್ಯಗಳಿಗೂ ಅಗತ್ಯವಿದ್ದು ಇದರ ಸಂಪೂರ್ಣ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮಿತ್ರಸಂಗಮ ಸಂಸ್ಥೆ ವಿಂಶತಿ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಈ ಕಾರ್ಯಕ್ರಮ ಶ್ಲಾಘನೀಯವಾದ ಸಂಗತಿ ಎಂದು ಬೀಜಾಡಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.

ಅವರು ಗುರುವಾರ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಮಿತ್ರಸಂಗಮ ಬೀಜಾಡಿ-ಗೋಪಾಡಿ ಇದರ ವಿಂಶತಿ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಬೃಹತ್ ಆಧಾರ್ ಕಾರ್ಡ್ ನೋಂದಣೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

beejadi news

ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯೆ ವೈಲೇಟ್ ಬೆರೆಟ್ಟೂ, ಬೀಜಾಡಿ ಗ್ರಾಮ ಪಂಚಾಯತಿ ಸದಸ್ಯ ವಾದಿರಾಜ್ ಹೆಬ್ಬಾರ್, ರವೀಂದ್ರ ದೊಡ್ಮನೆ, ಗೋಪಾಡಿ ಗ್ರಾಮ ಪಂಚಾಯತಿ ಸದಸ್ಯ ಸುರೇಶ್ ಶೆಟ್ಟಿ ಶುಭ ಹಾರೈಸಿದರು.

ಮಿತ್ರಸಂಗಮ ಸಂಸ್ಥೆ ವಿಂಶತಿ ಕಾರ್ಯಕ್ರಮದ ಸಂಯೋಜಕ ವಾದಿರಾಜ್ ಹೆಬ್ಬಾರ್ ಪ್ರಸ್ತಾವಿಕ ಮಾತನಾಡಿ ಮಾ.3ರ ಗುರುವಾರದಿಂದ ಮಾ.4ರ ಶುಕ್ರವಾರದ ತನಕ ಬೀಜಾಡಿ ಮಿತ್ರ ಸೌಧದಲ್ಲಿ ಬೆಳಿಗ್ಗೆ ಗಂಟೆ 9.30ರಿಂದ ಸಂಜೆ ಗಂಟೆ 4ರ ತನಕ ನಡೆಯಲಿದೆ. ನೋಂದಣೆಗೆ ಬರುವ ಸಾರ್ವಜನಿಕರು ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್‌ಕಾರ್ಡ್,ಚಾಲನಾ ಪರವಾನಿಗೆ ಸಹಿತ 18 ಇತರ ದಾಖಲೆಗಳಲ್ಲಿ ಯಾವುದಾದರು ಒಂದು ದಾಖಲೆ ತರಬೇಕು. 14 ವರ್ಷದೊಳಗಿನ ಮಕ್ಕಳ ನೋಂದಣೆಗಾಗಿ ತಂದೆ ಅಥವಾ ತಾಯಿಯ ಆಧಾರಕಾರ್ಡ್ ಹಾಗೂ ಮಗುವಿನ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರತಕ್ಕದ್ದು. ಜತೆಗೆ ಈ ಶಿಬಿರದಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದರು.

ವಾಣಿ ಹೆಬ್ಬಾರ್ ಪ್ರಾರ್ಥಿಸಿದರು. ಮಿತ್ರಸಂಗಮ ಸಂಸ್ಥೆ ಅಧ್ಯಕ್ಷ ಅನೂಪ್ ಕುಮಾರ್ ಬಿ.ಆರ್ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ನಾಗರಾಜ ಬೀಜಾಡಿ ವಂದಿಸಿದರು.

Write A Comment