ಕನ್ನಡ ವಾರ್ತೆಗಳು

ಶಂಭೂರಿನಲ್ಲಿ ಬೊಂಡಾಲ ಪ್ರಶಸ್ತಿ ಪ್ರದಾನ-2016

Pinterest LinkedIn Tumblr

sambhur_awrd_bondal

ಮಂಗಳೂರು,ಫೆ.25 : ‘ಯಕ್ಷಗಾನ ಒಂದು ಪಾರಂಪರಿಕ ಕಲೆ. ಹಿಂದಿನ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲಪಿಸುವುದರೊಂದಿಗೆ ಈ ಕಲೆಯ ಮೂಲಕ ಹಿರಿಯರನ್ನು ಸ್ಮರಿಸಿಕೊಳ್ಳುವ ಕಾರ್ಯವೂ ಆಗಬೇಕಿದೆ. ಇದರಿಂದ ನಮ್ಮ ಪರಂಪರೆ ಉಳಿಯುವುದಲ್ಲದೆ, ಯುವ ಜನಾಂಗಕ್ಕೆ ಯಕ್ಷಗಾನದ ಬಗ್ಗೆ ಗೌರವ ಮೂಡುತ್ತದೆ’ ಎಂದು ಕರ್ನಾಟಕ ರಾಜ್ಯದ ಅರಣ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ತಾಲ್ಲೂಕು ಶಂಭೂರಿನಲ್ಲಿ ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಮಂಡಳಿಯ ಬಯಲಾಟದ ವೇದಿಕೆಯಲ್ಲಿ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಿತಿಯ ವತಿಯಿಂದ ಏರ್ಪಡಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ೨೦೧೫-೧೬ ನೇ ಸಾಲಿನ ‘ಬೊಂಡಾಲ ಪ್ರಶಸ್ತಿ’ ಪ್ರದಾನ ನೆರವೇರಿಸಿ ಅವರು ಮಾತನಾಡಿದರು. ಕಟೀಲು ಕ್ಷೇತ್ರದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಆಶೀರ್ವಚನ ನೀಡಿದರು.

ಯಕ್ಷಗಾನ ಭಾಗವತ ಹಾಗೂ ಪ್ರಸಂಗಕರ್ತ ಕುಬಣೂರು ಶ್ರೀಧರರಾವ್ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವೇಷಧಾರಿ ಸಂಪಾಜೆ ಶೀನಪ್ಪ ರೈ ಅವರಿಗೆ ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ. ಬೊಂಡಾಲ ರಾಮಣ್ಣ ಶೆಟ್ಟಿಯವರ ಹೆಸರಿನಲ್ಲಿ ನಗದು ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಸಮಿತಿಯ ಪ್ರಧಾನ ಸಲಹೆಗಾರ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು. ಕೆ ಲಕ್ಷ್ಮೀನಾರಾಯಣ ರೈ ಹರೇಕಳ ಸಮ್ಮಾನ ಪತ್ರ ವಾಚಿಸಿದರು.

ನಿವೃತ್ತ ಶಿಕ್ಷಕ ನಾಟಿ ಕೃಷ್ಣರಾಜ ಶೆಟ್ಟಿ ಸಂಸ್ಮರಣಾ ಭಾಷಣ ಮಾಡಿ ದಿ.ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿಯವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ವಿವರಿಸಿದರು. ರಾಯಸ ಶ್ರೀನಿವಾಸ ಪೂಜಾರಿ ಮತ್ತು ಬೊಂಡಾಲ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.

ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮತ್ತು ಸಂಸ್ಮರಣಾ ಸಮಿತಿ ಸಂಚಾಲಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು. ಬಳಿಕ ಕಟೀಲು ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.

Write A Comment