ಮಂಗಳೂರು,ಫೆ.09 : ಅಭಿನಂದನ ಸಾಂಸ್ಕೃತಿ ಟ್ರಸ್ಟ್ ವತಿಯಿಂದ ಫೆಬ್ರವರಿ 13 ಮತ್ತು 14ರಂದು ಬೆಂಗಳೂರಿನ ಜಯನಗರದ 5ನೆ ಹಂತದಲ್ಲಿರುವ ಚಂದ್ರಗುಪ್ತ ವೌರ್ಯ ಕ್ರೀಡಾಂಗಣದಲ್ಲಿ (ಶಾಲಿನಿ ಗ್ರೌಂಡ್) ‘ನಮ್ಮೂರ ಹಬ್ಬ’ ಹಮ್ಮಿಕೊಳ್ಳಲಾಗಿದೆ ಎಂದು ‘ನಮ್ಮೂರ ಹಬ್ಬ’ದ ಗೌರವ ಸಲಹೆಗಾರವೂ ಆಗಿರುವ ಸಚಿವ ಯು.ಟಿ.ಖಾದರ್ ತಿಳಿಸಿದರು.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಬ್ಬದ ಮೂಲಕ ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ,ಜನಪದ ಆಚರಣೆ, ಕ್ರೀಡೆ, ಜೀವನಶೈಲಿಯ ಶ್ರೀಮಂತಿಕೆ ಮತ್ತು ಕರಾವಳಿಯ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗರಿಗೆ ಪರಿಚಯಿಸಲಿದೆ ಎಂದರು.
‘ನಮ್ಮೂರ ಹಬ್ಬ’ದ ಸಂಚಾಲಕ ಬೇಳೂರು ರಾಘವೇಂದ್ರ ಶೆಟ್ಟಿ ಮಾತನಾಡಿ, ಕಾರ್ಯಕ್ರಮವು ಫೆ. 13ರಂದು ಬೆಳಗ್ಗೆ 10:30ಕ್ಕೆ ಉದ್ಘಾಟನೆಗೊಳ್ಳಲಿದೆ. ಕಸಪಾ ಮಾಜಿ ಅಧ್ಯಕ್ಷ ಪುಂಡಲಿಕ ಹಾಲಂಬಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಸ್ಥಳೀಯ ಶಾಸಕರಾದ ಬಿ.ಎನ್.ವಿಜಯಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ನ ಈ ವರ್ಷದ ಪ್ರತಿಷ್ಟಿತ ‘ಕಿರೀಟ ಪ್ರಶಸ್ತಿ’ಯನ್ನು ಸಂಘ ಸಂಸ್ಥೆಗಳ ವಿಭಾಗದಲ್ಲಿ ಹೊಟೇಲ್ ಉದ್ಯಮದವರ ಶ್ರೇಯೋಭಿವೃದ್ಧಿಗಾಗಿ ಕಳೆದ 49 ವರ್ಷಗಳಿಂದ ಶ್ರಮಿಸಿದ ‘ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತ’ಕ್ಕೆ ಮತ್ತು ವೈಯಕ್ತಿ ವಿಭಾಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಪದ್ಮಶ್ರೀ ಡಾ.ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರಿಗೆ ಪ್ರದಾನ ಮಾಡಲಿರುವುದಾಗಿ ರಾಘವೇಂದ್ರ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬಿ.ಎನ್.ನರಸಿಂಹ, ಉದ್ಯಮಿ ಸುರೇಶ್ ಎನ್.ಶೆಟ್ಟಿ, ಯಕ್ಷಗಾನ ಕಲಾವಿದ ಸೀತಾರಾಂ ಕಟೀಲ್ ಉಪಸ್ಥಿತರಿದ್ದರು.