ಹೈದ್ರಾಬಾದ್, ಫೆ.9-15ಕೋಟಿ ರೂಪಾಯಿ ಬಂಡವಾಳ ಹಾಕಿ ಪಾಲುದಾರಿಕೆ ಮೇಲೆ ಆಸ್ಪತ್ರೆಯೊಂದನ್ನು ನಡೆಸುತ್ತಿದ್ದ ಮೂವರು ವೈದ್ಯರ ಜಗಳ ಒಬ್ಬ ವೈದ್ಯನ ಶೂಟ್‌ಔಟ್ ಮತ್ತು ಇನ್ನೊಬ್ಬ ವೈದ್ಯನ ಸಾವಿನೊಂದಿಗೆ ಪರಿಯವಸಾನಗೊಂಡ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ. ಡಾ.ಶಶಿಕುಮಾರ್, ಡಾ.ಉದಯಕುಮಾರ್ ಹಾಗೂ ಡಾ. ಸಾಯಿಕುಮಾರ್ ಮೂವರೂ ಆಸ್ಪತ್ರೆ ಪಾಲುದಾರರು. ಆಸ್ಪತ್ರೆ ನಿರ್ವಹಣೆ ವಿಷಯದಲ್ಲಿ ಈ ವೈದ್ಯರಲ್ಲಿ ವೈಮನಸ್ಸು ಮೂಡಿದೆ. ಹೊಟೇಲ್ ಒಂದರಲ್ಲಿ ಡಿನ್ನರ್‌ನಲ್ಲಿ ಪಾಲ್ಗೊಂಡಿದ್ದ ಮೂವರು ವೈದ್ಯರು ಮಾತಿಗೆ ಮಾತು ಬೆಳೆಸಿದ್ದಾರೆ. ನಂತರ ಹೊರಬಂದು ಕಾರಿನಲ್ಲಿ ಕುಳಿತಿದ್ದಾರೆ.
ಆಗ ಡಾ.ಶಶಿಕುಮಾರ್ ಅವರು ಉದಯಕುಮಾರ್‌ನತ್ತ ಗುಂಡು ಹಾರಿಸಿದ್ದಾನೆ. ಗುಂಡು ಕಿವಿಯನ್ನು ಸವರಿಕೊಂಡು ಹೋಗಿದೆ. ಗಾಯಗೊಂಡ ಉದಯ್‌ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದಾದ ಕೆಲವು ಗಂಟೆಗಳ ಬಳಿಕ ಡಾ.ಸಾಯಿಕುಮಾರ್ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಡಾ.ಉದಯ ಕುಮಾರ್‌ಗೆ ಗುಂಡು ಹಾರಿಸಿದ ಡಾ.ಶಶಿಕುಮಾರ್ ಪರಾರಿಯಾಗಿದ್ದು, ಪೊಲೀಸರು ಅವನಿಗಾಗಿ ಉಡುಕಾಟ ನಡೆಸಿದ್ದಾರೆ.
ಇಷ್ಟಕ್ಕೆಲ್ಲ ಕಾರಣವಾಗಿದ್ದು ಆಸ್ಪತ್ರೆ ನಿರ್ವಹಣೆ ವ್ಯವಸ್ಥೆ ವಿಷಯ. ಡಾ.ಉದಯಕುಮಾರ್ ಆಸ್ಪತ್ರೆಯ ಸಿಇಓ ಆಗಿದ್ದರು. ಸಾಯಿಕುಮಾರ್ ಎಂಡಿ ಆಗಿದ್ದರು. ಕಡಿಮೆ ಬಂಡವಾಳ ಹಾಕಿದ್ದ ಡಾ.ಶಶಿಕುಮಾರ್‌ಗೆ ಯಾವುದೇ ಅಧಿಕಾರ ಸಿಕ್ಕಿರಲಿಲ್ಲ. ಇದು ಅವನ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಡಾ.ಸಾಯಿಕುಮಾರ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಉದಯ್ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.