ಮಂಗಳೂರು, ಜ. 30: ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಸಮಾಜದಲ್ಲಿ ಬದಲಾವಣೆಗೆ ಯುವ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮುಂದಾಗಬೇಕು ಎಂದು ಮಾನವ ಹಕ್ಕುಗಳಿಗಾಗಿನ ಹಿರಿಯ ಹೋರಾಟಗಾರ್ತಿ ತೀಸ್ತಾ ಸೆಟಲ್ವಾದ್ ಕರೆ ನೀಡಿದರು.
ನಗರದ ರೋಶನಿ ನಿಲಯದಲ್ಲಿ ನಡೆದ ಪತ್ರಿಕೋದ್ಯಮ ಹಾಗೂ ಸಮಾಜ ಕಾರ್ಯ ಸ್ನಾತಕೋತ್ತರ ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಮಾತುಗಳ ಮೂಲಕ ಸಮಾಜದಲ್ಲಿ ಸಂಕಷ್ಟದಲ್ಲಿರುವವರ ಬಗ್ಗೆ, ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಧ್ವನಿಯಾಗುವಂತೆ ಅವರು ಪ್ರೇರೇಪಿಸಿದರು.
ಮಂಗಳೂರಿನ ದಲಿತ ಪ್ರಾಂಶುಪಾಲ ಸುದೇಶ್‌ರವರ ಆತ್ಮಹತ್ಯೆಗೆ ಕಾರಣವಾದ ಸನ್ನಿವೇಶವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದ ತೀಸ್ತಾ, ಈ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ದೊರೆಯದ ಬಗ್ಗೆಯೂ ಖೇದ ವ್ಯಕ್ತಪಡಿಸಿದರು.
ದೇಶದ 12 ರಾಜ್ಯಗಳು ಬರಪೀಡಿತವಾಗಿದ್ದರೂ ಇಂದು ಮಾಧ್ಯಮಗಳಲ್ಲಿ ಆ ಬಗ್ಗೆ ಸುದ್ದಿಯಾಗುತ್ತಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆಯ ಘಟನೆಗಳು ಕೆಲವೊಂದು ಪ್ರಾದೇಶಿಕ ಪತ್ರಿಕೆಗಳಲ್ಲಿ ಸುದ್ದಿಯಾದರೂ ಚಾನೆಲ್‌ಗಳಿಗೆ ಆ ಬಗ್ಗೆ ಸಮಯವೇ ಇಲ್ಲದಂತಾಗಿದೆ. ಇದು ವಿಷಾದನೀಯ ಎಂದು ಅವರು ಬೇಸರಿಸಿದರು.
ಬಾಬರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡ ಪ್ರಕರಣಗಳ ಸಂದರ್ಭ ಪತ್ರಕರ್ತೆಯಾಗಿ ತಾನು ಮಾಡಿದ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ವಿವರಿಸಿದ ಅವರು, ಕೇವಲ ಬೈಲೈನ್‌ಗಾಗಿ ಸುದ್ದಿ ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ಬದಲಾಗಿ ಸಮಾಜದಲ್ಲಿನ ತಪ್ಪುಗಳಿಗೆ ಧ್ವನಿಯಾಗುವ ಇರಾದೆಯಿಂದ ನಾನು ಪತ್ರಕರ್ತೆಯಾದೆ ಎಂದವರು ಹೇಳಿದರು.
ತನ್ನ 25ರ ಹರೆಯಲ್ಲಿ ಪತ್ರಕರ್ತೆಯಾಗುವ ತನ್ನ ಆಯ್ಕೆಗೆ ತನ್ನ ತಂದೆಯ ಬೆಂಬಲವನ್ನು ಮೆಲುಕು ಹಾಕುತ್ತಾ ತನ್ನ ಪತ್ರಿಕೋದ್ಯಮ ಬದುಕು, ಬಳಿಕ ತನ್ನ ಸಾಮಾಜಿಕ ಕಾರ್ಯಕರ್ತೆಯಾಗಿ ತಾನು ನಿರ್ವಹಿಸಿದ ಪಾತ್ರದ ಬಗ್ಗೆ ವಿದ್ಯಾರ್ಥಿಗಳೆದುರು ಮನಬಿಚ್ಚಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಸಮಾನರೆಂದು ಹೇಳುತ್ತಾರದರೂ ಹೆಚ್ಚಿನ ಮನೆಗಳಲ್ಲಿ ಇಂದಿಗೂ ಗಂಡು ಮಕ್ಕಳಿಗೆ ನೀಡುವ ಆದ್ಯತೆ ಹೆಣ್ಣು ಮಕ್ಕಳಿಗೆ ಇಲ್ಲವಾಗಿದೆ ಎಂದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ನಮ್ಮದು ಧರ್ಮ ಆಧಾರಿತ ರಾಷ್ಟ್ರವಲ್ಲ. ಹಾಗಿದ್ದರೂ ಪ್ರಸಕ್ತ ಸರಕಾರವು ನಮ್ಮ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಹೈದಾರಾಬಾದ್‌ನ ಕೇಂದ್ರೀಯ ವಿವಿ ಮತ್ತು ಎಫ್‌ಟಿಐಐ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿ ಮಾತನಾಡಿದ ತೀಸ್ತಾ, ದೇಶದ ಯುವಕರು ನಿರ್ಭಯದಿಂದ ಹೋರಾಟ ನಡೆಸುತ್ತಿದ್ದಾರೆ. ರೋಹಿತ್ ವೇಮುಲ ಪ್ರಕರಣವನ್ನು ಉಲ್ಲೇಖಿಸುತ್ತಾ, ದೇಶದ ಖಾಸಗಿ ನಿಯಂತ್ರಣದಲ್ಲಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕಿದೆ ಎಂದವರು ಹೇಳಿದರು.
ಈ ಸಂದರ್ಭ ಅವರು ಮಣಿಪುರ, ರಾಜಸ್ತಾನ, ಕೇರಳ ಮೊದಲಾದ ರಾಜ್ಯಗಳಿಂದ ಮಂಗಳೂರಿಗೆ ಆಗಮಿಸಿ ಪತ್ರಿಕೋದ್ಯಮ ಹಾಗೂ ಸಮಾಜ ಕಾರ್ಯ ವಿಭಾಗಗಳಲ್ಲಿ ನಗರದ ವಿವಿಧ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.
ಸರಕಾರೇತರ ಸಂಸ್ಥೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತನಿಖೆಗೊಳಪಡಿಸಬಹುದೇ ಎಂಬ ಪ್ರಶ್ನೆಯೊಂದಕ್ಕೆ, ಭ್ರಷ್ಟಾಚಾರ ಎಲ್ಲಿ ನಡೆದರೂ ಅದನ್ನು ಪ್ರಶ್ನಿಸುವ ಮತ್ತು ತನಿಖೆಗೊಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಮಂಗಳೂರು ಸಿಟಿಝನ್ ಫೋರಂನ ವಿದ್ಯಾ ದಿನಕರ್ ಕಾರ್ಯಕ್ರಮ ನಿರ್ವಹಿಸಿದರು. ಸಿಸ್ಟರ್ ಇವ್ಲಿನ್ ವಂದಿಸಿದರು.