
ಬೆಳ್ತಂಗಡಿ, ಜ.18 : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನಕ್ಸಲ್ ಕೂಬಿಂಗ್ ಹೆಸರಿನಲ್ಲಿ ವಿಧವೆಯೋರ್ವರಿಗೆ ಎಎನ್‍ಎಫ್ ಪಡೆ ದೌರ್ಜನ್ಯವೆಸಗಿರುವ ಬಗ್ಗೆ ವೇಣೂರು ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ಎಎನ್‍ಎಫ್ ಸಿಬ್ಬಂದಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ತನಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು, ನಾರಾವಿ ಭಾಗಗಳಲ್ಲಿ ಈ ಹಿಂದೆ ಎಎನ್‍ಎಫ್ ಪಡೆಯ ಸಿಬ್ಬಂದಿಗಳು ಅಲ್ಲಿನ ನಿವಾಸಿಗಳಿಗೆ ದೌರ್ಜನ್ಯ, ಕಿರುಕುಳ ನೀಡುತ್ತಿದ್ದ ಬಗ್ಗೆ ಆರೋಪಗಳಿದ್ದವು. ಈ ಬಗ್ಗೆ ಎಎನ್‍ಎಫ್ ಪಡೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಪ್ರತಿಭಟನೆಗಳು ಕೂಡಾ ನಡೆದಿತ್ತು. ವಿಠಲ ಮಲೆಕುಡಿಯ ಪ್ರಕರಣದ ಬಳಿಕ ಎಎನ್‍ಎಫ್‍ನ ದೌರ್ಜನ್ಯಕ್ಕೆ ಕಡಿವಾಣ ಬಿದ್ದಿತ್ತು. ಇದೀಗ ಮತ್ತೆ ಅದೇ ರೀತಿಯ ಕಿರುಕುಳ ದೌರ್ಜನ್ಯ ಆರಂಭವಾಗಿದೆ ಎಮದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಈ ಘಟನೆ ನಡೆದಿದ್ದು, ಜ. 14ರಂದು ನಾರಾವಿ ಪ್ರದೇಶಕ್ಕೆ ಕೂಬಿಂಗ್‍ಗಾಗಿ ಬಂದ ಎಎನ್‍ಎಫ್ ತಂಡ ಇಲ್ಲಿನ ಮೂಡಾಡಿ ನಿವಾಸಿ ಸುಜಾತ ಹೆಗ್ಡೆ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ನೊಂದ ಮಹಿಳೆ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ವಿವರ: ಜ. 14ರಂದು ಮಧ್ಯಾಹ್ನ 12.30ರ ಸುಮಾರಿಗೆ ಸುಜಾತ ಹೆಗ್ಡೆಯವರ ಮನೆ ಸಮೀಪದ ಗುಡ್ಡದಲ್ಲಿ ನಾಯಿ ಬೊಗಳುವುದನ್ನು ಕೇಳಿ ಸಹೋದರಿ ಪ್ರಜಾತ ಹೆಗ್ಡೆ ಜೊತೆ ಗುಡ್ಡಕ್ಕೆ ತೆರಳಿದಾಗ ಅಲ್ಲಿದ್ದ ಎಎನ್‍ಎಫ್ ತಂಡದ ಸಿಬ್ಬಂದಿಯು ತೀರಾ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ನಮ್ಮ ಚಲನವಲನಗಳನ್ನು ತಿಳಿದು ಸಂಘಟನೆಗಳಿಗೆ, ಮಾಧ್ಯಮಗಳಿಗೆ ಮಾಹಿತಿ ನೀಡುತ್ತೀರಿ. ನಮ್ಮ ಇಲಾಖೆ ಸೇರಿದಂತೆ ಅರಣ್ಯ ಇಲಾಖೆಯ ವಿರುದ್ಧ ಜನರನ್ನು ಸಂಘಟಿಸುತ್ತಿದ್ದೀರಿ. ಆ ಮೂಲಕ ನಮ್ಮನ್ನು ಎದುರು ಹಾಕಿಕೊಳ್ಳುತ್ತಾ ನಮ್ಮ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದೀರಿ. ಇನ್ನು ಮುಂದೆ ಈ ರೀತಿಯಾಗಿ ನಡೆದುಕೊಂಡರೆ ವಿಠಲನಿಗೆ ಆದ ಗತಿ ನಿಮಗೂ ಆಗಲಿದೆ. ನಿಮ್ಮನ್ನು ನಕ್ಸಲ್ ಏಜೆಂಟರೆಂದು ಕೇಸು ದಾಖಲಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ. ಇದರಿಂದ ಹೆದರಿದ ಸುಜಾತ ಹೆಗ್ಡೆಯವರು ತನ್ನ ಸಹೋದರಿ ಜೊತೆ ಮನೆಗೆ ಬಂದಾಗ ಅವರನ್ನು ಹಿಂಬಾಲಿಸಿಕೊಂಡು ಬಂದ ಸಿಬ್ಬಂದಿಗಳು, ಕೊಲೆ ಬೆದರಿಕೆಒಡ್ಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕಾಗಿ ಪೊಲೀಸರಿಗೆದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಪಶ್ಚಿಮ ವಲಯ ಐಜಿಪಿ, ಜಿಲ್ಲಾ ಎಸ್ಪಿ, ಬಂಟ್ವಾಳ ಎಎಸ್ಪಿ ಹಾಗೂ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರಗೆ ನೀಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ವಿಧವೆ ಮಹಿಳೆಗೆ ಜೀವ ಬೆದರಿಕೆ ಒಡ್ಡಿದ ಎಎನ್‍ಎಫ್ ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಬೆಳ್ತಂಗಡಿ ಘಟಕ ಸರಕಾರವನ್ನು ಆಗ್ರಹಿಸಿದೆ. ಇಂತಹ ಕೃತ್ಯಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ನಕ್ಸಲ್ ನಿಗ್ರಹದ ಹೆಸರಿನಲ್ಲಿ ನಾಗರಿಕರಿಗೆ ತೊಂದರೆ ನೀಡಿದರೆ ಅದರ ವಿರುದ್ಧ ತೀವ್ರ ರೀತಿಯ ಹೋರಾಟ ಸಂಘಟಿಸಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಸಿದೆ.