ಉಡುಪಿ: ಸಾಧು-ಸಂತರು ಹಾಗೂ ಸ್ವಾಮೀಜಿಗಳಿಂದಲೇ ದೇಶದ ಹೆಸರು ವಿಶ್ವದಾದ್ಯಂತ ಇನ್ನಷ್ಟು ಪ್ರಕಾಶಮಾನವಾಗಿ ಬೆಳೆಯುತ್ತಿದೆ. ಪೇಜಾವರ ಶ್ರೀಗಳು ಬಹಳ ಹಿಂದಿನಿಂದಲೂ ಪರಿಚಿತರಾಗಿದ್ದು ಅವರು ಐದನೇ ಬಾರಿಗೆ ಪೀಠಾರೋಹಣಗೈಯುತ್ತಿರುವುದು ಸಂತಸವನ್ನುಂಟು ಮಾಡಿದೆ. ಉಡುಪಿ ನನ್ನ ನೆಚ್ಚಿನ ತಾಣವಾಗಿದ್ದು ಈ ಕಾರ್ಯಕ್ರಮಕ್ಕೆ ಬರಲು ಇನ್ನಷ್ಟು ಪ್ರೇರಕವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಪಂಚಮ ಪರ್ಯಾಯದ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಘ್ಗೊಂಡು ಮಾತನಾಡಿದ್ದಾರೆ.
ಎರಡು ವರ್ಷದ ಪರ್ಯಾಯದ ಅವಧಿಯಲ್ಲಿ ಮೂರು ಮಹತ್ತರ ಘೋಷಣೆಯನ್ನು ಪರ್ಯಾಯ ಶ್ರೀಗಳು ಈ ಸಂದರ್ಭ ಹೇಳಿದ್ದಾರೆ. ದೇಶವನ್ನು ಹಸಿರುಮಯವನ್ನಾಗಿಸುವ ನಿಟ್ಟಿನಲ್ಲಿ ಸಸ್ಯ ಪ್ರೇಮಿಗಳಿಗೆ ಗಿಡಗಳ ದಾನ, ಉಡುಪಿ ಅಥವಾ ಪಾಜಕದಲ್ಲಿ ವೃದ್ಧಾಶ್ರಮ ಸ್ಥಾಪನೆ, ಹಾಗೂ ಪಾಜಕದಲ್ಲಿ ಶೈಕ್ಷಣಿಕ ಕೇಂದ್ರ ಸ್ಥಾಪನೆ, ಮದ್ಯಮುಕ್ತ ಸಮಾಜ ನಿರ್ಮಾಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ದುಷ್ಚಟ ಮುಕ್ತಿ ವಿಶೇಷ ಹುಂಡಿ ನಿರ್ಮಾಣ. ಉಡುಪಿಗೆ ಸಾವಿರಾರು ಯಾತ್ರಾರ್ಥಿಗಳು ಆಗಮಿಸುವ ನಿಟ್ಟಿನಲ್ಲಿ ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವುದು.
ಮಾಧ್ವರ ಬಗ್ಗೆ ದಲಿತ ವಿರೋಧಿ ಎಂದು ಅಪಪ್ರಚಾರ ನಡೆಸುತ್ತಿದ್ದು ಇದು ಸರಿಯಲ್ಲ, ಬ್ರಾಹ್ಮಣರು, ದಲಿತರು ಎಲ್ಲರೂ ಮೋಕ್ಷಕ್ಕೆ ಅರ್ಹರಾಗಿದ್ದು, ದಲಿತರು ಮೋಕ್ಷಕ್ಕೆ ಅರ್ಹರಲ್ಲ ಎನ್ನುವ ಮಾತು ಮಧ್ವರು ಹೇಳಿದ್ದಾರೆನ್ನುವ ಬುದ್ದಿಜೀವಿಗಳ ಸುಳ್ಳು ಹೇಳಿಕೆಗಳನ್ನು ಅವರು ನಿರೂಪಿಸಲಿ ಎಂದರು.
ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ, ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪುತ್ತಿಗೆ ಮಠದ ಶ್ರೀಗಳು ಮಾತ್ರ ಮೆರವಣಿಗೆ ಹಾಗೂ ದರ್ಬಾರ್ ಕಾರ್ಯಕ್ರಮದಲಿ ಪಾಲ್ಘೊಳ್ಳಲಿಲ್ಲ.
ಆಂದ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಸಚಿವರಾದ ಉಮಾ ಭಾರತಿ, ಅನಂತಕುಮಾರ್, ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿ.ಎಂ. ಇಬ್ರಾಹಿಂ, ಡಿ.ಎಚ್.ಶಂಕರಮೂರ್ತಿ, ಸಚಿವರಾದ ವಿನಯಕುಮಾರ್ ಸೊರಕೆ, ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್, ಆಂಜನೇಯ, ಯು.ಟಿ. ಖಾದರ್, ಅಭಯಚಂದ್ರ ಜೈನ್, ಬಿಜೆಪಿ ನಾಯಕರಾದ ಕೆ.ಎಸ್. ಈಶ್ವರಪ್ಪ, ಪ್ರಹ್ಲಾದ್ ಜೋಶಿ, ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್‌ನ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದರು.
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಡೆ ನೆರದವರನ್ನು ಸ್ವಾಗತಿಸಿದರು.