ಮಂಗಳೂರು,ಜ.18: : ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ (ಟಿಆರ್‌ಎಫ್) ದಶಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭವು ನಗರದ ಪುರಭವನದಲ್ಲಿ ಭಾನುವಾರ ನಡೆಯಿತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ‘ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಸಮಾಜದಲ್ಲಿ ಭರವಸೆಯನ್ನು ಬಿತ್ತುವ ಕೆಲಸ ಮಾಡುತ್ತಿದೆ. ಜಾತಿ, ಮತ, ಧರ್ಮ, ಪ್ರದೇಶದ ಭೇದವಿಲ್ಲದೇ ಈ ಸಂಸ್ಥೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿದ “ಶಿಕ್ಷಣದ ಕೊರತೆ, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ಕಾರಣದಿಂದ ಮುಸ್ಲಿಂ ಸಮುದಾಯ ಕವಲು ದಾರಿಯಲ್ಲಿದೆ. ತಾಯಂದಿರು ಎಚ್ಚೆತ್ತರೆ ಮಾತ್ರವೇ ಈ ಅಪಾಯದಿಂದ ಸಮುದಾಯವನ್ನು ಪಾರು ಮಾಡಲು ಸಾಧ್ಯವಿದೆ.’ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 20ರಷ್ಟು ಮಂದಿ ಮುಸ್ಲಿಮರಿದ್ದಾರೆ. ಆದರೆ, ಜಿಲ್ಲೆಯ ಕಾರಾಗೃಹಗಳಲ್ಲಿರುವವರ ಒಟ್ಟು ಸಂಖ್ಯೆಯಲ್ಲಿ ಶೇ 29ರಷ್ಟು ಮಂದಿ ಮುಸ್ಲಿಮರಿದ್ದಾರೆ. ಇದು ಈ ಸಮು ದಾಯದ ಮಕ್ಕಳು ತಪ್ಪು ಹಾದಿ ತುಳಿ ಯುತ್ತಿರುವುದನ್ನು ಎತ್ತಿ ತೋರುತ್ತಿದೆ. ಶಿಕ್ಷಣ ಮತ್ತು ಉದ್ಯೋಗದ ಮೂಲಕ ಜೀವನದಲ್ಲಿ ಘನತೆಯನ್ನು ದಕ್ಕಿಸಿಕೊಳ್ಳು ವುದು ಮುಸ್ಲಿಂ ಸಮುದಾಯದ ಆದ್ಯತೆ ಆಗಬೇಕು. ಅಪರಾಧ ಪ್ರವೃತ್ತಿಯತ್ತ ಮಕ್ಕಳು ಹೆಜ್ಜೆ ಹಾಕದಂತೆ ಇಡೀ ಸಮುದಾಯ ಒಟ್ಟಾಗಿ ತಡೆಯಬೇಕು ಎಂದು ಹೇಳಿದರು.
‘ಜಿಲ್ಲೆಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡುವ ಜವಾಬ್ದಾರಿ ಮುಸ್ಲಿಮರ ಮೇಲೂ ಇದೆ. ಶಾಂತಿ ಮತ್ತು ಸೌಹಾರ್ದ ಕಾಯ್ದುಕೊಳ್ಳುವ ವಿಚಾರದಲ್ಲಿ ನೀವು ಮುಂಚೂಣಿಯಲ್ಲಿ ನಿಲ್ಲಿ. ಇತರರು ಶಾಂತಿ ಕದಡುತ್ತಾರೆ ಎಂಬ ಆರೋಪ ಮಾಡುವುದಕ್ಕಿಂತಲೂ ನಾವು ಅಂತಹ ಕೆಲಸ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು’ ಎಂದರು.
ಚೆನ್ನೈನ ಮೆಕ್ಕಾ ಮಸೀದಿಯ ಧರ್ಮಗುರು ಮೌಲಾನಾ ಶಂಷುದ್ದೀನ್ ಖಾಸಿಮಿ, ಯೆನೆಪೋಯ ವಿಶ್ವವಿದ್ಯಾಲ ಯದ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ, ಐಎಎಸ್ ಅಧಿಕಾರಿ ಮೌಲಾನಾ ಮುಷರಫ್ ಅಲಿ ಫರೂಕಿ, ಪಶ್ಚಿಮ ಬಂಗಾಳದಲ್ಲಿ ಕಿರಿಯ ವಯಸ್ಸಿನಲ್ಲಿ ಶಾಲೆ ಸ್ಥಾಪಿಸಿರುವ ಬಾಬರ್ ಅಲಿ, ಜಯದೇವ ಹೇದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಬೆಂಗ ಳೂರಿನ ಹೋಂ ಆಫ್ ಹೋಪ್ ಸಂಸ್ಥೆಯ ಟಿ.ರಾಜಾ, ಎಚ್‌ಕೆಎಚ್ ಮತ್ತು ಎಕೆ ಸಮೂಹದ ಮಾಲೀಕ ಕೆ.ಅಬ್ದುಲ್ ಕರೀಮ್ ಶಿರಸಿ ಮತ್ತು ದೆಹಲಿಯ ರಿಹಾಬ್ ಇಂಡಿಯಾ ಫೌಂಡೇಶನ್‌ನ ಜಫ್ರುಲ್ಲಾ ಷರೀಫ್ ಅವರಿಗೆ ಟ್ಯಾಲೆಂಟ್ ನ್ಯಾಷನಲ್ ಐಕಾನ್– 2016 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಟಿಆರ್‌ಎಫ್ ಉಪಾಧ್ಯಕ್ಷ ಅಶ್ರಫ್ ಜಿ.ಬಾವಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ.ಮೊಹಮ್ಮದ್ ಹನೀಫ್, ಇನ್‌ಲ್ಯಾಂಡ್ ಬಿಲ್ಡರ್ಸ್ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹಮ್ಮದ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ಮಹಾನಗರ ಪಾಲಿಕೆ ಸದಸ್ಯ ಅಜೀಜ್ ಕುದ್ರೋಳಿ, ಫಾತಿಮಾ ಟ್ರೇಡರ್ಸ್ ವ್ಯವಸ್ಥಾಪಕ ನಿರ್ದೇಶಕ ಅಹಮ್ಮದ್ ಷರೀಫ್, ಟಿಆರ್‌ಎಫ್ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಉಪಸ್ಥಿತರಿದ್ದರು.