ಮಂಗಳೂರು: ಜ.18: ನಗರದ ಬಜಾಲ್ ಜಲ್ಲಿಗುಡ್ಡೆಯಲ್ಲಿ ಸುಮಾರು 8 ವರ್ಷ ಪ್ರಾಯದ ಬಾಲಕ ಪತ್ತೆಯಾಗಿರುವ ಘಟನೆ ನಡೆದಿದೆ. ಈ ಬಾಲಕ ಸುಮಾರು 4 ದಿನಗಳಿಂದ ಸದರಿ ಪರಿಸರದಲ್ಲಿ ತಿರುಗಾಡುತ್ತಿದ್ದು, ಬಾಲಕ ಸುತ್ತಾಡುವುದನ್ನು ಕಂಡ ಸ್ಥಳೀಯ ಸಾರ್ವಜನಿಕರು ಸಂಶಯಗೊಂಡು ವಿಚಾರಿಸಿ, ಮಕ್ಕಳ ಸಹಾಯವಾಣಿಗೆ ಕರೆಯನ್ನು ಮಾಡಿರುತ್ತಾರೆ. ಚೈಲ್ಡ್‌ಲೈನ್ ಮಂಗಳೂರು-1098 ಸಿಬ್ಬಂಧಿಗಳು ಈ ಬಾಲಕನನ್ನು ರಕ್ಷಿಸಿದ್ದು, ಬಾಲಕನ ಮುಂದಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.
ಈ ಬಾಲಕ ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಬಳಿಯ ಗ್ರಾಮವೊಂದರ ನಿವಾಸಿಯಾಗಿದ್ದು, ಕೆಲವು ಸಮಯಗಳ ಹಿಂದೆ ಈ ಬಾಲಕನ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿ, ತನ್ನ ಮಕ್ಕಳನ್ನು ನೋಡಿಕೊಳ್ಳಲು ಊರಿಂದ ಕರೆ ತಂದಿದ್ದು, ಕಳೆದ 5-6 ದಿನಗಳ ಹಿಂದೆ ಈ ಬಾಲಕನೊಬ್ಬನನ್ನೇ ಬಿಟ್ಟು ಬಳ್ಳಾರಿಗೆ ಹೋಗಿದ್ದು, ಇಲ್ಲಿ ಉಳಕೊಂಡ ಏಕಾಂಗಿ ಬಾಲಕ ಗ್ಯಾಸ್ ಸ್ಟೌವ್‌ನಲ್ಲಿ ಅನ್ನ ಬೇಯಿಸಿ ತಿನ್ನುತ್ತಿದ್ದ ಎಂದು ತಿಳಿಸಿರುತ್ತಾನೆ. ಸ್ಟೌವ್‌ನಲ್ಲಿ ಇಷ್ಟು ಸಣ್ಣ ಹುಡುಗ ಅನ್ನ ಬೇಯಿಸುವುದು ಅಪಾಯಕಾರಿ ಎಂದು ಸ್ಥಳೀಯರು ಹೇಳಿರುತ್ತಾರೆ.
ಬಾಲಕನ ನೈಜ ತಂದೆ ತಾಯಿಯ ಬಗ್ಗೆ ಮಾಹಿತಿ ಇರುವುದಿಲ್ಲ, ಶಾಲೆಗೆ ಕೂಡ ಕಳುಹಿಸದೇ ಮನೆಯಲ್ಲೇ ಇರಿಸಿಕೊಂಡಿದ್ದುದಲ್ಲದೇ, ಈಗ ಕೇವಲ ಬಾಲಕನನ್ನು ಒಬ್ಬಂಟಿಯಾಗಿ ಇಲ್ಲಿ ಬಿಟ್ಟು, ಚಿಕ್ಕಪ್ಪ-ಚಿಕ್ಕಮ್ಮ ಮಕ್ಕಳು ಕುಟುಂಬ ಸಮೇತ ಊರಿಗೆ ತೆರಳಿರುದನ್ನು ಗಮನಿಸಿದರೆ, ಮಗುವನ್ನು ಅಪಹರಿಸಿ ಇಲ್ಲಿ ತಂದಿರಿಸಿರಬಹುದು ಎಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ,
ಕನ್ನಡ ಬಾಷೆಯಲ್ಲಿ ಮಾತನಾಡುತ್ತಿದ್ದು, ಬಾಲಕನ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಿರುವುದಿಲ್ಲ. ಈ ಮಗುವಿನ ರಕ್ಷಣಾ ತಂಡದಲ್ಲಿ ಮಂಗಳೂರು ಚೈಲ್ಡ್‌ಲೈನ್-1098 ನ ನಗರ ಸಂಯೋಜನಾಧಿಕಾರಿ ಮತ್ತು ಕೇಂದ್ರ ಸಂಯೋಜನಾಧಿಕಾರಿಗಳಾದ ಸಂಪತ್ತ್ ಕಟ್ಟಿ, ಜಯಂತಿ ಕೋಕಳ, ಪವಿತ್ರಾ ಜ್ಯೋತಿಗುಡ್ಡೆ, ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜಲ್ಲಿಗುಡ್ಡೆ ಪಡ್ಪು ಶಾಲೆಯ ಶಿಕ್ಷಕರುಗಳು ಭಾಗವಹಿಸಿದ್ದರು.