ಕನ್ನಡ ವಾರ್ತೆಗಳು

ಕುಡಿದು ಶಾಲಾ ಬಾಲಕಿಗೆ ಕಿರುಕುಳ : ಸಾರ್ವಜನಿಕರಿಂದ ಪೊಲೀಸ್ ಪೇದೆಗೆ ಧರ್ಮದೇಟು

Pinterest LinkedIn Tumblr

Police_sada_arast

ಮಂಗಳೂರು : ಕುಡಿದು ಶಾಲಾ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಪೊಲೀಸ್ ಪೇದೆಯೋರ್ವನಿಗೆ ಸಾರ್ವಜನಿಕರು ಥಳಿಸಿ ಬಳಿಕ ಪಾಂಡೇಶ್ವರದಲ್ಲಿರುವ ಮಹಿಳಾ ಠಾಣೆಗೆ ಒಪ್ಪಿಸಿದ ಘಟನೆ ಗುರುವಾರ ಸಂಜೆ ಫಿಜಾ ಮಾಲ್ ಬಳಿ ನಡೆದಿದೆ.

ತನ್ನ ವರ್ತನೆಯಿಂದ ಸಾರ್ವಜನಿಕರಿಂದ ಧರ್ಮದೇಟು ಪಡೆದು ಇದೀಗ ಪೊಲೀಸ್ ವಶದಲ್ಲಿರುವ ಪೊಲೀಸ್ ಪೇದೆಯನ್ನು ಪೊಲೀಸ್ ಇಲಾಖೆಯ ಬೆರಳಚ್ಚು (ಫಿಂಗರ್ ಪ್ರಿಂಟ್) ವಿಭಾಗದಲ್ಲಿ ಕೆಲಸಮಾಡುತ್ತಿದ್ದ ಸದಾಶಿನ ಎಂದು ಗುರುತಿಸಲಾಗಿದೆ. ಈತ ಈ ಹಿಂದೆ ಉರ್ವ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈತನ ಅತಿಯಾದ ಕುಡಿತದ ಕಾರಣ ಹಾಗೂ ಪದೇ ಪದೇ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಈತನನ್ನು ಫಿಂಗರ್ ಪ್ರಿಂಟ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು ಎನ್ನಲಾಗಿದೆ.

ಗುರುವಾರ ಸಂಜೆ ನಗರದ ಪಾಂಡೇಶ್ವರದಲ್ಲಿರುವ ಫೋರಂ ಫಿಜ್ಜಾ ಮಾಲ್ ಸಮೀಪದ ರಸ್ತೆಯಲ್ಲಿ ಅಪ್ರಾಪ್ತ ಶಾಲಾ ಬಾಲಕಿಯೋರ್ವಳು ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಸದಾಶಿವ ಈ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ.ಮಾತ್ರವಲ್ಲದೇ ತನ್ನೊಂದಿಗೆ ಬರುವಂತೆ ಪೀಡಿಸಿ, ಕಿರುಕುಳ ನೀಡಿದ್ದಾನೆ. ಇದನ್ನು ಕಂಡ ಪರಿಸರದಲ್ಲಿದ್ದ ಸಾರ್ವಜನಿಕರು ಈತನಿಗೆ ಹಿಗ್ಗಾಮುಗ್ಗಾ ಥಳಿಸಿ ಅಲ್ಲೇ ಸಮೀಪದಲ್ಲಿರುವ ಪಾಂಡೇಶ್ವರ ಪೋಲಿಸ್ ಠಾಣೆಗೆ ಈತನನ್ನು ಒಪ್ಪಿಸಿದ್ದಾರೆ.

ಈತನನ್ನು ಬಂಧಿಸಿರುವ ಮಹಿಳಾ ಠಾಣಾ ಪೊಲೀಸರು ಹುಡುಗಿ ಹೇಳಿಕೆಯನ್ನು ಪಡೆದು ಈತನ ಮೇಲೆ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment