ಕನ್ನಡ ವಾರ್ತೆಗಳು

ಬೆಳ್ಕಲ್ ತೀರ್ಥದಲ್ಲಿ ಸಾವಿರಾರು ಜನರಿಂದ ಪವಿತ್ರ ತೀರ್ಥಸ್ನಾನ; ಇದು ಎಳ್ಳಮವಾಸ್ಯೆ ವಿಶೇಷ

Pinterest LinkedIn Tumblr

ಕುಂದಾಪುರ: ಕೊಲ್ಲೂರಿನ ಕೊಡಚಾದ್ರಿಯಿಂದ ಚಿಮ್ಮುವ ಜಲಪಾತ ( ಬೆಳ್ಕಲ್ ತೀರ್ಥ) ದುರ್ಗಮ ಕಾಡಿನ ಮಧ್ಯ ಕಂಗೊಳಿಸುತ್ತಿದ್ದು ಇದು ವನದೇವಿಯ ಮೈ ಮೇಲೆ ಬೆಳ್ಳಿಯ ಗೆರೆ ಮೂಡಿಸಿದಂತಿದೆ. ಎರಡು ಸಾವಿರಕ್ಕೂ ಅಧಿಕ  ಅಡಿ ಎತ್ತರದಿಂದ ಧುಮುಕುತ್ತಿರುವ ಈ ಜಲಪಾತ ಸೃಷ್ಟಿಕರ್ತನ ಒಂದು ಚಮತ್ಕಾರದಂತಿದ್ದು. ಈ ಜಲಪಾತದಲ್ಲಿ ಪ್ರತಿವರ್ಷ ಎಳ್ಳು‌ಅಮಾವಾಸ್ಯೆಯ ದಿನ ತೀರ್ಥಸ್ನಾನ ಮಾಡಲು ಸಾವಿರಾರು ಜನರು ಬರುತ್ತಾರೆ. ಅಂತೆಯೇ ಭಾನುವಾರ ಬೆಳಿಗ್ಗೆನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸಿ ತೀರ್ಥಸ್ನಾನ ಮಾಡಿ ಪುನೀತರಾದರು.

ಕಠಿಣ ಹಾದಿಯ ನಡುವೆ ಪಯಣ: ಕುಂದಾಪುರದಿಂದ 60 ಕಿ.ಮೀ.ಗೂ ಅಧಿಕ ದೂರವಿರುವ ಈ ಬೆಳ್ಕಲ್ ಚಾರಣ ಕೊಲ್ಲೂರು ಮಾರ್ಗದಲ್ಲಿ ಜಡ್ಕಲ್‌ನಿಂದ ಪೂರ್ವಾಭಿಮುಖವಾಗಿ ಸುಮಾರು 25 ಕಿ.ಮೀ ದೂರದಲ್ಲಿ ಇರುವ ಉದಯ ನಗರದಿಂದ ಸುಮಾರು 8 ಕಿ.ಮೀ ದೂರದ ದಟ್ಟ ಕಾನನದ ಮಧ್ಯ ಇರುವ ಈ ನೈಸರ್ಗಿಕ ಸೊಬಗು ಚಾರಣ ಪ್ರಿಯರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಆದರೆ ಈ ತೀರ್ಥದ ಬಳಿ ತೆರಳುವುದು ಮಾತ್ರ ಸುಲಭ ಸಾಧ್ಯವಲ್ಲ, ಇಲ್ಲಿಗೆ ಸಾಗಬೇಕಾದರೆ ಕಾಲು ದಾರಿಯಲ್ಲಿ ಸುಮಾರು 5 ಕಿ.ಮೀ. ಕಾಡಿನಲ್ಲಿ ಗುಡ್ಡ, ಬಂಡೆಗಳ ನಡುವೆ ಸುಮಾರು ಒಂದು ಗಂಟೆ ಕಾಲ್ನಡಿಗೆಯ ಮೂಲಕ ತೀರ್ಥದ ಬಳಿ ತಲುಪಬೇಕಾಗಿದೆ. ಹಾದಿಯೂ ತೆರಳಲು ದುಸ್ತರವಾಗಿದ್ದು ಇದು ಮೂಲ ಸೌಕರ್ಯ ವಂಚಿತವಾಗಿ ಸೊರಗಿದೆ.

Belkal Theertha_Yellamavasye_snana (10) Belkal Theertha_Yellamavasye_snana (9) Belkal Theertha_Yellamavasye_snana (1)

Belkal Theertha_Yellamavasye_snana (3)

????????????????????????????????????

????????????????????????????????????

Belkal Theertha_Yellamavasye_snana (2)

Belkal Theertha_Yellamavasye_snana (6)

Belkal Theertha_Yellamavasye_snana (4) Belkal Theertha_Yellamavasye_snana (5)

ಕಾರಣೀಕ ಸ್ಥಳ: ಈ ಬೆಳ್ಕಲ್ ತೀರ್ಥ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿದ್ದರು, ಇದೊಂದು ಕಾರಣೀಕ ಸ್ಥಳವಾಗಿದೆ. ಈ ತೀರ್ಥದಿಂದ 5 ಕಿ.ಮೀ ಹಿಂದೆ ವಿಶ್ವಂಭರ ಮಹಾಗಣಪತಿ ಗೋವಿಂದ ಮತ್ತು ಕೋಟಿಲಿಂಗೇಶ್ವರ ದೇಗುಲವಿದೆ. ಇದು ಸಹ ಹಲವು ವರ್ಷದ ಹಿಂದೆ ಬೆಳ್ಕಲ್ ತೀರ್ಥ ಜಲಪಾತವಿರುವ ಸ್ಥಳದಲ್ಲಿಯೇ ಇದ್ದಿತ್ತು. ಜಲಪಾತ ಇರುವ ಸ್ಥಳವು ತುಂಬಾ ದುರ್ಗಮವಾಗಿದ್ದು ಭಕ್ತರಿಗೆ ದೇವರ ದರ್ಶನ ಪಡೆಯುವುದು ತುಂಬಾ ಕಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅಲ್ಲಿರುವ ದೇವರನ್ನು ಸುಮಾರು 5 ಕಿ.ಮೀ ಹಿಂದೆ ದೇಗುಲ ಮಾಡಲಾಯಿತು ಎನ್ನಲಾಗುತ್ತಿದೆ. ಎಳ್ಳಮಾವಾಸ್ಯೆಯ ದಿನದ ತೀರ್ಥಸ್ನಾನದ ಬಳಿಕ ಈ ದೇವಾಲಯದಲ್ಲಿಯೂ ಕೂಡಾ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬರುವ ಭಕ್ತರಿಗಾಗಿ ಇಲ್ಲಿ ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಬೆಳ್ಕಲ್ ತೀರ್ಥಸ್ನಾನ ಹಾಗೂ ದೇವರ ದರ್ಶನದ ಬಳಿಕ ಇಲ್ಲಿಗೆ ಬರುವ ಭಕ್ತರು ಸಾಗುವುದು ಕ್ಷೇತ್ರದಿಂದ ಸುಮಾರು 15 ಕಿ.ಮೀ. ದೂರದ ಕೆರಾಡಿ ಸಮೀಪದ ಕೆರಾಡಿ ಮೂಡುಗಲ್ಲು ಗುಹಾಂತರ ದೇವಾಲಯಕ್ಕೆ. ಇಲ್ಲಿ ತೀರ್ಥಸ್ನಾನದ ಬಳಿಕ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರೇ ಒಳಿತಾಗುತ್ತದೆ ಎನ್ನುವ ನಂಬಿಕೆ ಮೇರೆಗೆ ಈ ದೇವಸ್ಥಾನಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ.

ತೀರ್ಥ ಸ್ನಾನದ ಮಹಿಮೆ: ಈ ಬೆಳ್ಕಲ್ ತೀರ್ಥವು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಎಳ್ಳಮಾವಾಸ್ಯೆಯ ದಿನದಂದು ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಅದರಂತೆ ಸಾವಿರಾರು ಭಕ್ತರು ಎಳ್ಳಮಾವಾಸ್ಯೆಯ ದಿನ ಎತ್ತರದಿಂದ ಧುಮುಕುತ್ತಿರುವ ಈ ಜಲಪಾತದಲ್ಲಿ ಸ್ನಾನ ಮಾಡುತ್ತಾರೆ. ಆದರೇ ಮೇಲಿನಿಂದ ಕೆಳಕ್ಕೆ ಧುಮುಕುವ ತೀರ್ಥ ಕೆಳಗಡೆ ಇರುವ ಎಲ್ಲರ ಮೇಲೆ ತೀರ್ಥ ಬೀಳುತ್ತದೆ ಎಂದು ಹೇಳಲಾಗದು ಕೆಲವೊಮ್ಮೆ ಅದು ತನ್ನ ಪಥವನ್ನು ಬದಲಾಯಿಸುತ್ತದೆ ಎನ್ನುವುದು ಒಂದೆಡೆಯಾದರೇ ಹಾಗೂ ಧುಮುಕುವ ನೀರಿನ್ನು ಆಸ್ವಾದಿಸುತ್ತಾ ಭಕ್ತಿ ಭಾವದೊಂದಿಗೆ ಜನರು ಪುಳಕಿತರಾಗುವುದು.

kemaru shri

ಕೇಮಾರು ಶ್ರೀ ಶಪಥ: ನೆನೆಗುದಿಗೆ ಬಿದ್ದಿರುವ ಈ ಕ್ಷೇತ್ರದ ಮೂಲಸೌಕರ್ಯ ಅಭಿವ್ರದ್ಧಿಗೆ ಕೇಮಾರು ಸಾಂದೀಪನಿ ಮಠದ ಶ್ರೀ ಈಶವಿಠಲ ಸ್ವಾಮೀಜಿ ಪಣತೊಟ್ಟಿದ್ದಾರೆ. ವರ್ಷವೂ ಎಳ್ಳಮವಾಸ್ಯೆ ದಿನದಂದು ಸ್ಥಳಕ್ಕೆ ತನ್ನ ಭಕ್ತರೊಂದಿಗೆ ತೆರಳುವ ಶ್ರೀಗಳು ಅಲ್ಲಿ ಆಗಮಿಸುವ ಭಕ್ತರಿಗೆ ತೀರ್ಥದ ಬಗ್ಗೆ ಮಾಹಿತಿ ನೀಡುವ ಜೊತೆಗೆ ಪಾವಿತ್ರ್ಯತೆಯ ಬಗ್ಗೆ ಹಾಗೂ ಅದನ್ನು ಕಾಪಾಡುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಸ್ವಾಮೀಜಿಯವರೊಂದಿಗೆ ಆಸಕ್ತ ಪತ್ರಕರ್ತರು, ಸಾಮಾಜಿಕ ಕಳಕಳ್ಳಿಯುಳ್ಳ ಪರಿಸರ ಪ್ರೇಮಿಗಳು ಸಾಥ್ ನೀಡುತ್ತಲೇ ಬಂದಿದ್ದಾರೆ. ಆದರೇ ಇವರ ಪ್ರಯತ್ನಕ್ಕೆ ಈವರೆಗೆ ಸರಕಾರ ಮಾತ್ರ ಸ್ಪಂದಿಸಿಲ್ಲ, ‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿ, ಸ್ಥಳದ ಅಭಿವ್ರದ್ಧಿಗೆ ನನ್ನ ಕೈಯಲ್ಲಾದ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಶ್ರೀಗಳು.

ಚಿತ್ರ- ಹರೀಶ್ ಕೆ.ಆದೂರು, ಗಂಗಾಧರ ಹೆಗ್ಡೆ
ವರದಿ- ಯೋಗೀಶ್ ಕುಂಭಾಸಿ

Write A Comment